ಶುಕ್ರವಾರ, ಆಗಸ್ಟ್ 30, 2013

"ಡುಂಡಿ" ಅನ್ನೋ ಸಂಶೋದನೆ ಮತ್ತು "ಇನ್ನೋಸೆನ್ಸ್ ಆಫ್ ಮುಸ್ಲಿಂ " ಅನ್ನೋ ವಿಕೃತಿ

ಬಿ ಎಂ ಬಷೀರ್ ಎಂಬ ಮನುಷ್ಯನ ದ್ವಂದದ ಬಗ್ಗೆ ಬರೆಯಲು ವರುಷವೇ ಸಾಲದೇನೋ , ಈ ಕೆಳಗಿನ ಎರಡು ಲೇಖನ ನೋಡಿ , ಒಂದು ಹಿಂದೂಗಳ ದೇವರಾದ ಗಣಪತಿಯನ್ನ ಅವಮಾನಿಸಿದ "ಡುಂಡಿ" ಕಾಂದಬರಿ ಲೇಖಕನ ಬಂದನದ ಕುರಿತು , ಇನ್ನೊಂದು ಪ್ರವಾದಿ ಮೊಹಮದ್ ರವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ "ಇನೋಸೆನ್ಸ್ ಆಫ್ ಮುಸ್ಲಿಂ" ಎಂಬ ಚಿತ್ರ ನಿರ್ದೇಶಕನ ಕುರಿತು.
ಡುಂಡಿ ಲೇಖಕನ ಕುರಿತು ಇರುವ ಅವರ ಸಹಾನುಭೂತಿ, ಇನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನಿರ್ದೇಶಕನ ಕುರಿತು ಅವರಿಗಿಲ್ಲ. ಡುಂಡಿ ಕೃತಿ ಚರ್ಚೆಗೆ ಒಳಪಡಬೇಕು ಅನ್ನೋ ಮನುಷ್ಯ , ಆ ಚಿತ್ರವನ್ನು ಕೂಡ ವಿಮರ್ಶೆಗೆ ಒಳಪಡಿಸಬೇಕು ಅನ್ನೋದಿಲ್ಲ... 
ಪುಸ್ತಕದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸುವ ಬಷೀರರು, "ಮುಸ್ಲಿಂ" ಚಿತ್ರದ ವಿರುದ್ದ ನಡೆದ ಪ್ರತಿಭಟನೆಯನ್ನ ಸಮರ್ಥಿಸಿಕೊಳ್ಳುತ್ತಾರೆ...
ಡುಂಡಿ ಪುಸ್ತಕ ರಚಿಸಿದ್ದು ಕೆಲವು ಸಂಶೋದನೆಗಳ ಮೇಲೆ ಎಂದು ಸಮರ್ಥಿಸುವ , ಅವರು "ಇನ್ನೋಸೆನ್ಸ್ ಆಫ್ ಮುಸ್ಲಿಂ " ಅನ್ನ ಒಂದು ಸಂಶೋಧನೆ ಎನ್ನಲಾರರು  
"ಡುಂಡಿ" ಯನ್ನ ನಿಷೇದಿಸುವುದು ಅಭಿವ್ಯಕ್ತಿ ಸ್ವಾತ್ರಂತ್ಯದ ಹರಣ ಎಂದು ಪ್ರತಿಪಾದಿಸುವ ಬಷೀರರು , "ಮುಸ್ಲಿಂ" ಚಿತ್ರವನ್ನು ವಿಕೃತಿ ಅನ್ನುತ್ತಾರೆ .... 
ಪರಧರ್ಮವನ್ನು ಹೀಯಾಳಿಸಿದರೆ ಖುಷಿ ಪಡುವ , ಸ್ವ ಧರ್ಮದ ಬಗ್ಗೆ ಯಾರಾದರು ಟೀಕಿಸಿದರೆ ತಿರುಗಿ ನಿಲ್ಲುವ ಇಂಥವರು ಪತ್ರಿಕೋದ್ಯಮದ ಮಟ್ಟಿಗೆ ಕಪ್ಪು ಚುಕ್ಕೆಯೇ ...

ಎರಡು ಲೇಖನ ಕೆಳಗೆ ಕೊಟ್ಟಿದ್ದೀನಿ , ಬಷೀರ್ ಎಂಬ ಅರೆಬೆಂದ ಮನಸ್ಥಿತಿ ನಿಮಗೆ ಅರ್ಥ ಆಗಲಿ ಅಂತ....    



---------------------------------------------------------------------------------------------------------

ವಾರ್ತಾಭಾರತಿ ದೈನಿಕದ ಶುಕ್ರವಾರದ ಸಂಚಿಕೆಯ ಸಂಪಾದಕೀಯ 

ಗಣಪತಿಗೆ ಮಾಡಿದ ಅಪಚಾರ
ಶುಕ್ರವಾರ - ಆಗಸ್ಟ್ -30-2013

ಒಬ್ಬ ಕೊಲೆಗಾರನನ್ನು, ಒಬ್ಬ ಕ್ರಿಮಿನಲ್‌ನನ್ನು ಬಂಧಿಸುವಾಗ ಪೊಲೀಸರು ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಒಬ್ಬ ಲೇಖಕನನ್ನು ಮಾತ್ರ, ಅತ್ಯಂತ ಸುಲಭವಾಗಿ ಬಂಧಿಸಿ ಜೈಲಿಗೆ ತಳ್ಳುತ್ತಾರೆ. ಯಾಕೆಂದರೆ ಲೇಖಕರ ಹಿಂದಿರುವುದು, ಅವನ ಬಡಪಾಯಿ ಓದುಗರು ಮಾತ್ರ. ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಇರುವುದಿಲ್ಲ. ಅವನನ್ನು ಬಂಧಿಸಿದರೆ ಕೇಳುವವರು ಯಾರೂ ಇಲ್ಲ ಎನ್ನುವುದು ಪೊಲೀಸರಿಗೆ ಚೆನ್ನಾಗಿ ಗೊತ್ತಿದೆ. ಹೆಚ್ಚೆಂದರೆ, ಒಂದು ಹತ್ತು ಮಂದಿ ಚಿಂತಕರು, ಲೇಖಕರು ಸೇರಿ ಪ್ರತಿಭಟನೆ ನಡೆಸಬಹುದು. ಕೆಲವು ಜನ ಸೇರಿದರೆ ಅವರನ್ನು ಲಾಠಿಯಲ್ಲಿ ಮಣಿಸಬಹುದು. ಮತ್ತೂ ಜನ ಸೇರಿದರೆ ಅವರಿಗೆ ನಕ್ಸಲೀಯರೆಂಬ ಹಣೆಪಟ್ಟಿ ಕಟ್ಟಿ ಅವರನ್ನು ಮುಂದೆ ಹೆಜ್ಜೆ ಇಡದಂತೆ ಮಾಡಬಹುದು. ಬಹುಶಃ ಈ ಸರಳ ಯೋಚ
ನೆಯ ಬಲದಿಂದಲೇ ಇರಬೇಕು, ಗುರುವಾರ ಓರ್ವ ಲೇಖಕನನ್ನು ಪೊಲೀಸರು ಬಂಧಿಸಿ ಎಳೆದೊಯ್ದಿದ್ದಾರೆ. ಅಂದ ಹಾಗೆ ಈತ ಯಾವುದೇ ಮಾಧ್ಯಮಗಳು ದಿನನಿತ್ಯ ನಡೆಸುವಂತೆ ಕೋಮು ಪ್ರಚೋದಕವಾದ ಬರಹಗಳನ್ನು ಬರೆದಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಲ್ಲ. ಆತ ಒಂದು ಕಾದಂಬರಿಯನ್ನು ಬರೆದ. ಅದೊಂದೇ ಕಾರಣಕ್ಕೆ ಕೃತಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿ ಎತ್ತೊಯ್ದರು. 
‘ಢುಂಢಿ’ ಎನ್ನುವ ಕಾದಂಬರಿಯನ್ನು ಬರೆದ ಲೇಖಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ. ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು. ಅದೂ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಓರ್ವ ಹಿರಿಯ ಸಾಹಿತಿ ಮಾಡಿದ ಭಾಷಣ ಮತ್ತು ಪುಸ್ತಕದ ಮುನ್ನುಡಿಯನ್ನಷ್ಟೇ ಓದಿ ಚರ್ಚೆ ಮಾಡಿ, ಸಮಾಜವನ್ನು ಕಲಕಿದ್ದಾರೆ. ಇದೀಗ ಅದರ ಫಲವನ್ನು ಲೇಖಕ ಉಣ್ಣುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಿಘ್ನ ನಿವಾರಕ ಗಣಪತಿಯ ಕುರಿತಂತೆ ಪುರಾಣದಲ್ಲಿ ನೂರಾರು ಕತೆಗಳಿವೆ. ಗಣಪತಿಯನ್ನು ಭಾರತೀಯರಲ್ಲಿ ಬಹುತೇಕ ಮಂದಿ ವಿಘ್ನ ನಿವಾರಕ ಎಂದು ನಂಬುತ್ತಾರೆ. ಒಂದು ರೀತಿಯಲ್ಲಿ ಅವನ ರೂಪವೇ ವಿಮರ್ಶೆ, ಗೇಲಿಗೆ ಒಳಪಡುತ್ತದೆ. ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ. ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ. ‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು. ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಆ ಕೃತಿಗಿಲ್ಲ. ಒಂದು ವೇಳೆ ಆ ಕೃತಿ ಅದನ್ನು ನಂಬಿದವರ ಭಾವನೆಗಳಿಗೆ ನೋವನ್ನುಂಟು ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ. ಆದರೆ, ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ.
ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ. ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು. ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದನು. ಇದೀಗ ಗಣಪತಿಯ ಸಂಶೋಧನಾತ್ಮಕ ಕೃತಿಯ ಬಗ್ಗೆ ತಮ್ಮ ಮೂಗಿನ ನೇರಕ್ಕೆ ವದಂತಿಗಳನ್ನು ಹಬ್ಬಿಸಿ ಅದೇ ಪತ್ರಿಕೆಗಳೇ ಲೇಖಕನ ಬಂಧನಕ್ಕೆ ಕಾರಣವಾಗಿರುವುದು ವಿಷಾದನೀಯ.
ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನ ಅಕ್ಷಮ್ಯ. ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಬಂಧಿಸಲ್ಪಟ್ಟ ಲೇಖಕನನ್ನು ತಕ್ಷಣ ಬಿಡುಗಡೆ ಮಾಡಿ, ಸರಿಯಾದ ದಾರಿಯಲ್ಲಿ ಕಾನೂನು ಹೆಜ್ಜೆಯಿಡಬೇಕು. ಗಣಪತಿ ವಿದ್ಯೆಯ ಅಧಿದೇವತೆ ಎಂಬ ನಂಬಿಕೆಯಿದೆ. ಜ್ಞಾನದ ಅಧಿದೇವತೆಯಾದ ಗಣಪತಿಯ ಹೆಸರಿನಲ್ಲೇ ಇದೀಗ ಜ್ಞಾನವನ್ನು ಅದುಮಿಡಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವುದು ನಿಜಕ್ಕೂ ಗಣಪತಿಗೆ ಮಾಡುವ ಅಪಚಾರವೇ ಸರಿ.

-------------------------------------------------------------------------------------------
"ಇನ್ನೋಸೆನ್ಸ್ ಆಫ್ ಮುಸ್ಲಿಂ'' ನಿರ್ದೇಶಕನೊಬ್ಬನ ವಿಕಾರ ಮುಖ...
ಸೆಪ್ಟೆಂಬರ್ ೨೪ , ೨೦೧೨


ಇತ್ತೀಚಿಗೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನೋಡಿದೆ. ಆ ಚಿತ್ರವನ್ನು ಮಾಡಿದ ಮನುಷ್ಯನ ವಿಕಾರ ಮುಖವನ್ನಷ್ಟೇ ನನಗೆ ಅದರಲ್ಲಿ ನೋಡಲು ಸಾಧ್ಯವಾಯಿತು.

ಮಹಮ್ಮದ್ ಪೈಗಂಬರ್ ನಾನು ಅತಿ ಇಷ್ಟಪಡುವ ಮನುಷ್ಯ.
೧೫೦೦ ವರ್ಷಗಳ ಹಿಂದೆ ವ್ಯಾಪಾರಿಗಳ ನಾಡಿನಲ್ಲಿ ""ಇಂದಿನಿಂದ ಬಡ್ಡಿ ನಿಷೇಧಿಸಲಾಗಿದೆ'' ಎಂದು ಘೋಷಿಸಿ, ಬಡವರನ್ನು ಸುತ್ತುವರಿದ ಬಡ್ಡಿಯ ಸಂಕಲೆಯನ್ನು ಕಳಚಿದ ಈತನಲ್ಲದೇ ನನ್ನ ಪ್ರವಾದಿ ಇನ್ನೊಬ್ಬನು ಇರಲು ಸಾಧ್ಯವೇ?. ಒಂದು ವೇಳೆ ತನ್ನ ಧರ್ಮವನ್ನು ಪ್ರಚಾರ  ಮಾಡೋದೇ ಪ್ರವಾದಿಯ ಉದ್ದೇಶವಾಗಿದ್ದರೆ ವ್ಯವಸ್ಥೆಯ ವಿರುದ್ಧ ಇಂತಹ ಒಂದು ನಿರ್ಣಯ ಮಾಡಲು ಸಾಧ್ಯವಿತ್ತೆ? ವ್ಯವಸ್ಥೆಯೊಂದಿಗೆ,  ಮುಖ್ಯವಾಗಿ ದೊಡ್ಡ ವ್ಯಾಪಾರಿಗಳೊಂದಿಗೆ, ಶ್ರಿಮಂತರೊಂದಿಗೆ ರಾಜಿ ಮಾಡಿಕೊಂಡಿದ್ದರೆ ಬಹುಶಹ  ಇದಕ್ಕಿಂತಲೂ ವಿಶಾಲವಾಗಿ ಧರ್ಮವನ್ನು ಬೆಳೆಸಬಹುದಿತ್ತೋ ಏನೋ..

ವ್ಯಭಿಚಾರವನ್ನು ಘನತೆ ಎಂದು ತಿಳಿದುಕೊಂಡ ಸಮಾಜದಲ್ಲಿ ವ್ಯಭಿಚಾರ ಮಾಡಬೇಡಿ. ಬೇಕಾದರೆ ಆಕೆಯನ್ನು ಮದುವೆಯಾಗಿ, ಆಕೆಗೆ "ಪತ್ನಿಗೆ ಸಲ್ಲಬೇಕಾದ ಹಕ್ಕು''ಗಳನ್ನು ನೀಡಿ ಎಂದು ಘೋಶಿಸಿದ್ದವರನ್ನು ಪ್ರೀತಿಸದೇ ;ಇರಲು ಸಾಧ್ಯವೇ.

೧೫೦೦ ವರ್ಷಗಳ ಹಿಂದೆಯೇ "ಪಾನ ನಿಷೇಧ'' ಜಾರಿಗೆ ತಂದ ಮನುಷ್ಯನ ಸಂದೇಶ ನನ್ನ ಪಾಲಿಗೆ ಅಪ್ಪಟ ದೇವರ ಸಂದೇಶವೇ ಹೌದು.
"ಇನ್ನು ಮುಂದೆ ಬಡ್ಡಿ ಮನ್ನಾ ಮಾಡಲಾಗಿದೆ. ನಿಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ನೀಡೋದು  ಕಡ್ಡಾಯವಾಗಿದೆ'' ಈ  ಸಂದೇಶಕ್ಕು ಖಡ್ಗ ಕ್ಕೂ ಯಾವುದಾದರು ಸಂಬಂಧ ಇದೆಯೇ?

ಕಾಣದ ಆ ದೇವರ ಕಾಲಿಗಷ್ಟೇ ಬೀಳಬೇಕು. ಮನುಷ್ಯರ ಕಾಲಿಗೆ ಬೀಳುದನ್ನು  ನಿಷೇಧಿಸಲಾಗಿದೆ ಎಂಬ ಅಪ್ಪಟ ಸಮಾನತೆಯ ಕನಸನ್ನು ಕಾಣಲು ಈ ಜಗತ್ತಲ್ಲಿ ಪ್ರವಾದಿ ಮಹಮ್ಮದ್ಗಷ್ಟೇ ಸಾಧ್ಯವಾಯಿತು.

ಸಾಧಾರಣ ಎಲ್ಲ ಧಾರ್ಮಿಕ ಸುಧಾರಕರು ತಮ್ಮ  ಅನುಯಾಯಿಗಳನ್ನು ಶಿಷ್ಯರು ಎಂದು ಕರೆಯುತ್ತಾರೆ. ಆದರೆ ಪ್ರವಾದಿ ತನ್ನ ಅನುಯಾಯಿಗಳನ್ನು “ಸಂಗಾತಿ-(ಸಹಾಬಿ)'' ಎಂದು ಕರೆದರು. ಸಂಗಾತಿ ಅಥವಾ ಕಾಮ್ರೇಡ್ ಎಂಬ ಶಬ್ದವನ್ನು ಮೊದಲು ಬಳಸಿದ್ದು ಮಹಮ್ಮದ್.. ಯಾವತ್ತು ತನ್ನ ಕಾಲಿಗೆ ಬೀಳೋದು, ತನ್ನನ್ನು  ಕಂಡಾಗ ಎದ್ದು ನಿಲ್ಲೋದನ್ನು ಸಂಗಾತಿಗಳಿಗೆ ಮಹಮ್ಮದ್ ನಿಷೇಧಿಸಿದ್ದರು.

೧೫೦೦ ವರ್ಷಗಳ ಹಿಂದೆ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಘೋಷಿಸಿದ್ದು ಮಹಮ್ಮದ್. ಹೆಣ್ಣನ್ನು ಹೂತುಹಾಕುವ ವ್ಯವಸ್ಥೆಯಲ್ಲಿ, ಹೆಣ್ಣನ್ನು ಮದುವೆಯಾಗುವಾಗ…ಆಕೆಗೆ ಮೆಹರನ್ನು (ವಧುದಕ್ಷಿಣೆ) ಕಡ್ಡಾಯ ಗೊಳಿಸಿದರು. ಅಂದಿನ ದಿನಗಳಲ್ಲಿ ಹೆಣ್ಣಿಗೆ ಇದೊಂದು ಭಾರೀ  ಕೊಡುಗೆಯೇ ಆಗಿತ್ತು.

ಇಸ್ಲಾಂ ಖಡ್ಗದಿಂದ ಆಗಿತ್ತೆ? ತನ್ನ ಚಿಂತನೆಯನ್ನು ಹರಡುವಾಗ ಮಹಮ್ಮದ್ ಒಬ್ಬಂಟಿಯಾಗಿದ್ದರು. ಒಬ್ಬಂಟಿಯಾಗಿ ಅವರು ತನ್ನ ಹೋರಾಟವನ್ನು ಮಾಡಿದರು. ಅವರಿಗೆ ಮೊದಲು ಜೊತೆಯಾದುದು  ಸಂಗಾತಿ ಅಬುಬಕರ್. ಅನಾಥ ಮಹಮ್ಮದ್ನನ್ನು ಸಾಕಿದ್ದು ದೊಡ್ಡಪ್ಪ ಅಬು ತಾಲಿಬ್. ವಿಶೇಷವೆಂದರೆ ಅಬು ತಾಲಿಬ್ ತನ್ನ ಜೀವನದ ಕೊನೆಯವರೆಗೂ ಇಸ್ಲಾಂ ಸ್ವೀಕರಿಸಲಿಲ್ಲ. ಆದರೆ ಅವರ ನಡುವೆ ಸಂಬಂಧಕ್ಕೆ ಅದರಿಂದ ಯಾವ  ಧಕ್ಕೆಯಾಗಲಿಲ್ಲ. ಇಸ್ಲಾಂ ಸ್ವೀಕರಿಸುವಂತೆ ಮಹಮ್ಮದ್ ಸದಾ ದೊಡ್ಡಪ್ಪನನ್ನು ಮನವೊಲಿಸುತ್ತಲೇ ಇದ್ದರು. ದೊಡ್ಡಪ್ಪ ಸಾಯುವ ಹಂತದಲ್ಲಿರುವಾಗ  ಇಸ್ಲಾಂ ಸ್ವೀಕರಿಸುವಂತೆ  ಮಾಡಲು ಕೊನೆಯ ಪ್ರಯತ್ನ ನಡೆಸಿದರು. "ಇಸ್ಲಾಮ್ಮ್ ಸ್ವೀಕರಿಸಿದರೆ ಸಮಾಜದಲ್ಲಿ ನನ್ನ ಘನತೆಗೆ ಕುಂದುಂಟಾಗುತ್ತದೆ'' ಎಂದು ಅಬುತಾಲಿಬ್ ಆ ಆಹ್ವಾನವನ್ನು ನಿರಾಕರಿಸಿದರು. ದೊಡ್ಡಪ್ಪ ಸಾವಿನ ಕೊನೆಯ ಕ್ಷಣದಲ್ಲಿದ್ದಾಗ ಮುಹಮ್ಮದ್ ಅವರ ದೇಹವನ್ನೆಲ್ಲ ತನ್ನ ಕೈಯಿಂದ ಸವರಿದರಂತೆ. "ನನ್ನ ಕೈ ಸ್ಪರ್ಶದಿಂದ ದೊಡ್ಡಪ್ಪ ಸ್ವರ್ಗ ಸೇರಲಿ'' ಎನ್ನುವ ಆಶೆಯಿಂದ. ವಿಶೇಷವೆಂದರೆ, ಅಬುತಾಲಿಬ್ ಇಸ್ಲಾಂ ಸ್ವೀಕರಿಸದೆ ಇದ್ದರೂ ಪ್ರವಾದಿಯನ್ನು  ಶತ್ರುಗಳಿಂದ ತಮ್ಮ ಜೀವ ಇರುವವರೆಗೂ ರಕ್ಷಿಸಿದರು. ಅಬುತಾಲಿಬ್ ಒಬ್ಬರಿಗೆ ಹೆದರಿ ಮಹಮ್ಮದರನ್ನು ಶತ್ರುಗಳು ಕೊಲ್ಲದೆ ಉಳಿಸಿದ್ದರು. ಪರಸ್ಪರರ ಚಿಂತನೆ ಬೇರೆಯಾಗಿದ್ದರು ಪರಸ್ಪರರನ್ನು ಪ್ರೀತಿಸುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿ ದೊಡ್ಡ ಉಧಾಹರಣೆ ಇಲ್ಲಿದೆ.

ಇಸ್ಲಾಮಿನಲ್ಲಿ  ಮೊತ್ತ ಮೊದಲ ಪ್ರಾರ್ಥನೆಯ  ಕರೆ ಅಥವಾ ಅಜಾನ್ ನೀಡಿರುವುದು ಒಬ್ಬ ನಿಗ್ರೋ. ಅವರ ಹೆಸರು ಬಿಲಾಲ್. ಗುಲಾಮಿ ವ್ಯವಸ್ಥೆಯನ್ನು  ಪ್ರಶ್ನಿಸಿದ ಮಹಾ ಮನುಷ್ಯನೋಬ್ಬನನ್ನು ಯಾರಿಗಾದರು ದ್ವೇಷಿಸಲು ಸಾಧ್ಯ ಎಂದರೆ, ಆತನ ಹೃದಯ ಕೊಳೆತಿದೆ ಎಂದೇ ಅರ್ಥ.
"ನಾನು ದೇವರಲ್ಲ, ನಿಮ್ಮಂತೆಯೇ ಮನುಷ್ಯ.'' ಎಂದು ಪದೇ ಪದೇ ಘೋಷಿಸಿ…ಎಲ್ಲೂ ತನ್ನ ಭಾವಚಿತ್ರವು ಇರದಂತೆ ಜಾಗೃತೆ ವಹಿಸಿದ ಅಪ್ಪಟ ಮನುಷ್ಯ ಮಹಮ್ಮದ್. ಅವರ  ಚಿತ್ರ ಒಂದಿದ್ದರೆ ಇಂದು ಅದನ್ನೇ  ದೇವರಾಗಿ ಪೂಜಿಸುತ್ತಿದ್ದರು. ಗಲ್ಲಿ ಗಲ್ಲಿಗಳಲ್ಲಿ  ಅವರ ಪ್ರತಿಮೆಗಳು ನಿಂತಿರುತ್ತಿತ್ತು. ಇಂದಿಗೂ  ಪ್ರವಾದಿ ಮಹಮ್ಮದ್ ದೇವರು ಅಲ್ಲ ಎಂದು ದೃಡವಾಗಿ ನಂಬಿರೋದರ ಹಿಂದೆ ಅವರ ದೂರದೃಷ್ಟಿ ಕೆಲಸ ಮಾಡಿದೆ. ಹೆಚ್ಚಿನ ಧರ್ಮ ಪ್ರಚಾರಕರು ಬೋಧನೆ ಮಾಡುತ್ತಾ ಮಾಡುತ್ತಾ ತಾವೇ ದೇವರಾದರು. ಆದರೆ ಮಹಮ್ಮದ್ ಅದನ್ನು ನಖಶಿಖಾಂತ ತಡೆದರು.

ನಾನು ಹೊಸದಾಗಿ ಧರ್ಮವನ್ನು ಸೃಷ್ಟಿಸುತ್ತಿಲ್ಲ. ಹಿಂದೆ ಆಗಿ ಹೋಗಿರುವ  ಜೀಸಸ್, ಮೋಶೆ, ಅಬ್ರಾಹಾಂ,  ದಾವುದ್ ಎಲ್ಲರು ಇಸ್ಲಾಮ್ನ ಪ್ರವಾದಿಗಳೇ. ಅವರು ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ. ಹೊಸತಾಗಿ ಏನು ಹೇಳುತ್ತಿಲ್ಲ..ಎಂದು ಹೇಳಿದ್ದು ಮಾತ್ರವಲ್ಲ, ಕ್ರಿಶ್ಚಿಯನ್, ಯಹೂದಿಗಳು ನಂಬುವ ಪ್ರವಾದಿಗಳ ಹೆಸರನ್ನು ಹೇಳುವಾಗಲು ಕಡ್ಡಾಯವಾಗಿ ಅವರಿಗೆ ದೇವರು  ಶಾಂತಿ ನೀಡಲಿ  ಎಂದು ಹೇಳಿ ಗೌರವ ಸೂಚಿಸಲು  ಕಳಿಸಿದ್ದು ಮಹಮ್ಮದ್. ಈ ಮನುಷ್ಯ ನನಗೆ ಇಷ್ಟವಾಗದೆ ಇರೋದಕ್ಕೆ ಕಾರಣಗಳು ಇವೆಯೇ?

ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಪ್ರತಿಭಟಿಸುವ, ಅದನ್ನು ನಿಷೇಧಿಸಬೇಕು ಎಂದು ಒತ್ತಾಯಿಸುವ ಒಂದು ಸಮೂಹವನ್ನು ಮತ್ತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ” ಅಪರಾಧಿಗಳನ್ನಾಗಿ ಕಟಕಟೆಯಲ್ಲಿ ನಿಲ್ಲಿಸುತ್ತಿರೋದು. ಆ ಸಿನಿಮಾಕ್ಕೆ ಬಂದ ಪ್ರತಿಭಟನೆಯು  ಅದೂ ಅಭಿವ್ಯಕ್ತಿಯೇ ಅಲ್ಲವೇ? “ಇನ್ನೋಸೆನ್ಸ್ ಆಫ್ ಮುಸ್ಲಿಂ…” ನಿರ್ದೇಶಕ ಸಿನಿಮಾದಂತಹ ಅದ್ಭುತ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಯಾವುದೇ ವೈಚಾರಿಕ ಚರ್ಚೆಗಳಿಲ್ಲದ  ಈ ಚಿತ್ರ , ಕೋಟ್ಯಂತರ ಜನ ಪ್ರೀತಿಸುವ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸುವ ಉದ್ದೇಶಕ್ಕಾಗಿಯೇ ಮಾಡಿರೋದಾಗಿದೆ.. ಒಂದು ಗಂಬೀರ ಚರ್ಚೆಗೆ ಸಾಧ್ಯ ಮಾಡಿಕೊಡುವ ಸಿನಿಮ ಮಾಧ್ಯಮ ಇಂಥವರ ಕೈಯಲ್ಲಿ ದುರ್ಬಳಕೆಯಾದಾಗ, ನಾಳೆ ಅದರ ಪರಿಣಾಮವನ್ನು ಸೃಜನ ಶೀಲ ನಿರ್ದೇಶಕರು ಎದುರಿಸಬೇಕಾಗುತ್ತದೆ. ಕ್ಯಾಮರದಲ್ಲಿ ಸಿನಿಮ ತೆಗೆದರೆ ಅಭಿವ್ಯಕ್ತಿ. ಅದೇ ಕ್ಯಾಮರದಲ್ಲಿ ಒಬ್ಬನ ತಲೆಗೆ ಹೊಡೆದರೆ ಅದನ್ನು ಸಿನಿಮ ಎಂದು ಕರೆಯಲಾಗೋದಿಲ್ಲ. ಅದು ಹಿಂಸೆ, ಕ್ರೌರ್ಯ…ಅದನ್ನೇ ಆ ನಿರ್ದೇಶಕ ಮಾಡಿದ್ದಾನೆ.

ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಮಾಡಿದ ನಿರ್ದೇಶಕ ಖಂಡಿತವಾಗಿಯೂ ಒಂದು ಭಯಾನಕ ರೋಗದಿಂದ ನರಳುತ್ತಿದ್ದಾನೆ. ಆ ರೋಗ ಬೇಗ ವಾಸಿಯಾಗಿ ಆತ ಗುಣಮುಖನಾಗಲಿ ಎಂದು ಹಾರೈಸುವ. ಅವನ ಉದ್ದೇಶವೇ ಕ್ರೌರ್ಯವನ್ನು ಉದ್ಧೀಪಿಸೋದು.. ಸಹನೆ ಮತ್ತು ತಾತ್ಸಾರದಿನ್ದಷ್ಟೇ ಆ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಅದಕ್ಕೆ ಅವನಂತೆಯೇ  ಪ್ರತಿಕ್ರಯಿಸಲು ಹೋದಲ್ಲಿ...ಅವನು ತನ್ನ ಉದ್ದೇಶವನ್ನು ಸಾಧಿಸ ತೊಡಗುತ್ತಾನೆ. ಹಿಂಸಾ ರೀತಿಯ ಪ್ರತಿಭಟನೆಯನ್ನೇ ಮುಂದಿಟ್ಟುಕೊಂಡು ತನ್ನ ಚಿತ್ರವನ್ನು ಸಮರ್ಥಿಸ ತೊಡಗುತ್ತಾನೆ.

3 ಕಾಮೆಂಟ್‌ಗಳು:

  1. ಆದರೆ ಬೂ ಬ ನ ಮುತ್ತಾತ ತಾತಂದಿರು ಇಸ್ಲಾಂ ಗೆ ಮತಾಂತರಗೊಂಡದ್ದು ಖಡ್ಗದ ಮೊನೆಯಲ್ಲೇ ಎನ್ನುವುದು ಬೂಸಿಗೂ ಗೊತ್ತು ನಮಗೂ ಗೊತ್ತು

    ಪ್ರತ್ಯುತ್ತರಅಳಿಸಿ
  2. ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಬಂಧಿಸಲ್ಪಟ್ಟ ಲೇಖಕನನ್ನು ತಕ್ಷಣ ಬಿಡುಗಡೆ ಮಾಡಿ, ಸರಿಯಾದ ದಾರಿಯಲ್ಲಿ ಕಾನೂನು ಹೆಜ್ಜೆಯಿಡಬೇಕು. ಗಣಪತಿ ವಿದ್ಯೆಯ ಅಧಿದೇವತೆ ಎಂಬ ನಂಬಿಕೆಯಿದೆ. ಜ್ಞಾನದ ಅಧಿದೇವತೆಯಾದ ಗಣಪತಿಯ ಹೆಸರಿನಲ್ಲೇ ಇದೀಗ ಜ್ಞಾನವನ್ನು ಅದುಮಿಡಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವುದು ನಿಜಕ್ಕೂ ಗಣಪತಿಗೆ ಮಾಡುವ ಅಪಚಾರವೇ ಸರಿ.>>>> agreed... very true...

    ಪ್ರತ್ಯುತ್ತರಅಳಿಸಿ