ಬುಧವಾರ, ಆಗಸ್ಟ್ 28, 2013

ನಾನು ಎನ್ನುವ ಕೋಮುವಾದಿಯ ಮತ್ತೊಂದು ಮುಖ

ನವಂಬರ್ ೧ ೨೦೦೭ ಅವತ್ತು ನಾನು ಮತ್ತು ನಮ್ಮ ಗುರುಮೂರ್ತಿ ಮತ್ತು ನಾಲ್ಕು ಜನ ಎಬಿವಿಪಿ ಗೆಳೆಯರು ರಕ್ತದಾನ ಮಾಡಲು ನಾರಾಯಣ ಹೃದಯಾಲಯಕ್ಕೆ ಹೋಗಿದ್ದೆವು. ಅದು ನನ್ನ ಪ್ರಥಮ ರಕ್ತದಾನ ಹಾಗಾಗಿ ಸ್ವಲ್ಪ ಅಂಜಿಕೆ ಅಂತು ಇತ್ತು . ರಕ್ತ ಕೊಡಬೇಕಾದದ್ದು ೩ ತಿಂಗಳ ಹಸುಗೂಸಿಗೆ. ಹುಟ್ಟುತ್ತಲೇ ಹೃದಯದಲ್ಲಿ ರಂಧ್ರ ಇಟ್ಟುಕೊಂಡಿದ್ದ ಆ ಮುದ್ದು ಹೆಣ್ಣುಮಗಳ ಹೆಸರು ಭೂಮಿಕ. ಹೆಣ್ಣು ಎಂದು ಗೊತ್ತಾದರೆ ಹುಟ್ಟುವ ಮೊದಲೇ ಸಾಯಿಸುವ ಜನಗಳ ಮದ್ಯೆ ಆ ೩ ತಿಂಗಳ ಮಗುವನ್ನು ಬದುಕಿಸಲು ಹೆಣಗುತ್ತಿದ್ದ ಆ ಅಪ್ಪನ ಮುಖ ಇಂದಿಗೂ ಕಣ್ಣಲಿದೆ.
ಹೋಗಿದ್ದ ೬ ಜನರಲ್ಲಿ ರಕ್ತ ಕೊಟ್ಟವರು ೫ ಜನ ಮಾತ್ರ. ಮಾತಲ್ಲೇ ಪಾಕಿಸ್ತಾನದ ಪ್ರಧಾನಿಯನ್ನು ನಿಂತಲ್ಲೇ ಸಾಯಿಸಬಲ್ಲ ನಮ್ಮ ಗುರುಮೂರ್ತಿ ಅಂದು ಯಾಕೋ ಬಿಳುಚಿ ಬೆವೆತು ರಕ್ತ ಕೊಡಲು ಅನ್ ಫಿಟ್ ಅನ್ನಿಸಿಕೊಂಡ.
ನಮ್ಮದೇ ಖರ್ಚಿನಲ್ಲಿ ಹೋಗಿ ಒಂದು ರುಪಾಯಿಯನ್ನು ಪಡೆಯದೇ ರಕ್ತ ಕೊಡುವ ಅವಶ್ಯಕತೆ ಏನಿತ್ತು ಅಂತ ಕೇಳಿದವರು ಇದ್ದಾರೆ.... ಆದರೆ ಅದರಲ್ಲಿರುವ ತೃಪ್ತಿಯನ್ನು ಅನುಭವಿಸಿದವನಿಗೆ ಗೊತ್ತು. ಅದರಲ್ಲೂ ನನಗಿರುವುದು B ನೆಗೆಟಿವೆ ರಕ್ತ, ಬಹಳ ವಿರಳವಾದ ಈ ಗುಂಪಿನ ರಕ್ತ ಬ್ಲಡ್ ಬ್ಯಾಂಕ್ ಗಳಲ್ಲಿ ಸಾಮಾನ್ಯವಾಗಿ ಸಿಗೋದಿಲ್ಲ ಹಾಗಾಗಿ ಅಗತ್ಯ ಇದ್ದವರು ನೇರವಾಗಿ ಸಂಪರ್ಕಿಸಲಿ ಅಂತ ಫೇಸ್ ಬುಕ್ ನಲ್ಲಿ ಕೂಡ ಹಾಕಿಕೊಂಡಿದ್ದೇನೆ. ರಕ್ತದಾನ ಮಾಡುವ ಅವಕಾಶ ಸಿಗುವುದು ೩ ತಿಂಗಳಿಗೆ ಒಮ್ಮೆ ಮಾತ್ರ ಆದರೆ ಆ ೩ ತಿಂಗಳ ಒಳಗೆ ನನಗೆ ಕನಿಷ್ಠ ೧೦ ಕರೆಯಾದರು ಬರುತ್ತೆ. ಕೊಡಕ್ಕೆ ಸಾದ್ಯ ಇಲ್ಲ ಅಂತ ಹೇಳೋದು ಮನಸಿಗೆ ಅತ್ಯಂತ ನೋವು ಕೊಡುವ ವಿಷಯ.
ಮೊನ್ನೆ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ರಕ್ತ ಕೊಟ್ಟಿದ್ದು ೧೦ನೇ ಬಾರಿ. ಪ್ರತಿಸಲನು ರಕ್ತ ಕೊಡುವಾಗ ನೆನಪಾಗುವುದು ಭೂಮಿಕಳ ಮುಖ, ಎಲ್ಲಿದಿಯೋ ಹೇಗಿದಿಯೋ ಆ ಕಂದ ಗೊತ್ತಿಲ್ಲ ಆದರೆ ನನ್ನೊಳಗಿನ ಮನುಷ್ಯನನ್ನ ಬಡಿದೆಬ್ಬಿಸಿದ್ದು ಆಕೆನೆ... ನೂರು ವರುಷ ಚೆನ್ನಾಗಿ ಬದುಕಲಿ ಆಕೆ ಅನ್ನೋದು ನನ್ನ ಹಾರೈಕೆ ...
ನನ್ನಿಂದ ಈವರೆಗೆ ರಕ್ತ ಪಡೆದ ೧೦ ಜನರಲ್ಲಿ ೩ ಜನ ಮುಸ್ಲಿಮರು, .... ಇದು ಅವಿನಾಶ್ ಹೆಗ್ಡೆ ಎಂಬ ಸೋ ಕಾಲ್ಡ್ ಕೋಮುವಾದಿಯ ಇನ್ನೊಂದು ಮುಖ

1 ಕಾಮೆಂಟ್‌:

  1. ಅಯ್ಯೋ ಇದನ್ನು ಹೀಗೆ ಪಬ್ಲಿಕ್ಕಾಗಿ ಹೇಳಿ ಬಹಳ ಕಷ್ಟ ಆಯಿತಲ್ಲ? ಇನ್ನು ನಿಮ್ಮ ಕೋಮುವಾದಿ ರಕ್ತವನ್ನು ಅವರ ದೇಹಗಳಿಂದ ಬೇರ್ಪಡಿಸುವುದು ಹೇಗೆ? :) - ತುಳುವ

    ಪ್ರತ್ಯುತ್ತರಅಳಿಸಿ