ಮಂಗಳವಾರ, ನವೆಂಬರ್ 4, 2014

ಮತ್ತೆ ಹುಟ್ಟಿ ಬಾರದಿರು ನಂದಿತಾ , ನಿನ್ನ ಕಾಪಾಡುವ ಯೋಗ್ಯತೆ ನಮಗಿಲ್ಲ ..



ತೀರ್ಥಹಳ್ಳಿ ಬೆಚ್ಚಿ ಬಿದ್ದಿದೆ .... ನಿಜ ತೀರ್ಥಹಳ್ಳಿ ಬೆಚ್ಚಿ ಬಿದ್ದಿದೆ..
ಯಾವ ಊರನ್ನು , ಸುಸಂಸ್ಕೃತರ ನಾಡು ಅನ್ನುತ್ತಿದ್ದೆವು, ಯಾವ ಊರಿನ ಜನರನ್ನು ಸಭ್ಯರು , ಸಜ್ಜನರು ಅನ್ನುತ್ತಿದ್ದೆವು ,ಯಾವ ಊರಿನಲ್ಲಿ ನೀರು ಕೇಳಿದವರಿಗೆ ಬೆಲ್ಲ ಕೊಡುತ್ತಿದ್ದರೋ , ಅದೇ ಜನ ಇಂದು ರೊಚ್ಚಿಗೆದ್ದಿದ್ದಾರೆ , ತಮ್ಮದೇ ಊರಿನ ಎಳೆ ಹೆಣ್ಣು ಮಗಳನ್ನ , ಹಾಡಹಗಲೇ ಅಪಹರಿಸಿ , ಅತ್ಯಾಚಾರ ನಡೆಸಿ , ವಿಷ ಕುಡಿಸಿ ಕೊಲೆಗೈದ ಸಂಗತಿಯನ್ನ ಅರಗಿಸಿಕೊಳ್ಳಲಾಗದೆ ತೊಳಲಾಡುತ್ತಿದ್ದಾರೆ ... ತೀರ್ಥಹಳ್ಳಿ ಜನ ಬೀದಿಗೆ ಬಂದಿದ್ದಾರೆ , ಆ ನತದೃಷ್ಟ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ ಪ್ರತಿಕಾರ ಕೇಳುತ್ತಿದ್ದರೆ , ಸತ್ತವಳು ಯಾರ ಮಗಳಾದರೇನು , ತಮ್ಮದೇ ಮಗಳೇನು ಎಂಬಂತೆ ಕಂಬನಿ ಮಿಡಿದಿದ್ದಾರೆ ... ಇಡಿ ತಾಲೂಕ್ಕಿಗೆ ತಾಲೂಕು ಪ್ರತಿಭಟನೆಯಲ್ಲಿ ನಿರತವಾಗಿದ್ದರೆ , ಆದರೆ ಇಲ್ಲೊಬ್ಬ ಮನುಷ್ಯ ಏನು ಆಗಿಯೇ ಇಲ್ಲವಂತೆ ತಣ್ಣಗೆ ಹೇಳಿಕೆ ಕೊಡುತ್ತ ಓಡಾಡುತ್ತಿದ್ದಾರೆ, ಆ ಮನುಷ್ಯ ಬೇರೆ ಯಾರು ಅಲ್ಲ , ಈ ಘನವೆತ್ತ ಸರ್ಕಾರದ ಶಿಕ್ಷಣ ಮಂತ್ರಿ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ್ ...

ಕಿಮ್ಮನೆ ರತ್ನಾಕರ್ , ಹುಡುಗಿ ತೀರಿಕೊಂಡ ದಿನ ಕೊಟ್ಟ  ಹೇಳಿಕೆ ಹೇಗಿತ್ತು ಎಂದರೆ , ತೀರ್ಥಹಳ್ಳಿ ಜನತೆಗೂ , ನಂದಿತಾ ಸಾವಿಗೂ ಸಂಭಂದವೇ ಇಲ್ಲ , ಪ್ರತಿಭಟನೆ , ಗಲಾಟೆ ನಡೆಸುತ್ತಿರುವುದು ಬಿಜೆಪಿ ಜನರೇ ಹೊರತು, ಸಾಮಾನ್ಯ ನಾಗರಿಕರಲ್ಲ ಎಂದು .ಒಬ್ಬ ಜನಪ್ರತಿನಿಧಿ ಹಾಳಾಗಿ ಹೋಗಲಿ , ಒಬ್ಬ ಮನುಷ್ಯನಾಗಿ ಇಂತಹ ಮಾತು ಯಾರಾದ್ರೂ ಆಡಲು ಸಾಧ್ಯವೇ .. ಬಾಲಕಿಯ ಸಾವಿನಲ್ಲೂ ರಾಜಕೀಯ ಹುಡುಕುವ... ಸಾವಿಗೆ ನ್ಯಾಯ ಕೇಳುವ ಪ್ರತಿಭಟನೆಯಲ್ಲೂ ದುರುದ್ದೇಶ ಕಾಣುವ ಇಂತಹ ಮನುಷ್ಯ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅನ್ನುವುದು , ಇಡಿ ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ..  ತೀರ್ಥಹಳ್ಳಿ ಯಾ ಜನ ಒಬ್ಬ ಅಮಾಯಕ ಬಾಲಕಿಯ ಸಾವಿಗೆ ನ್ಯಾಯ ಕೇಳುವ ಹಾಗೆ ಇಲ್ಲವ ? ಹಾಗಾದ್ರೆ ತೀರ್ಥಹಳ್ಳಿಯ ಸಾಮಾನ್ಯ ನಾಗರಿಕ ಅಷ್ಟೊಂದು ಸಂವೇದನ ಹೀನನಾಗಿ ಬದಲಾದನೆ ? , ನಂದಿತಾ ಳ ಶವ ಮೆರವಣಿಗೆಯಲ್ಲಿ ಕಣ್ಣಿರು ಇಡುತ್ತಿದ್ದ ಹೆಣ್ಣು ಮಕ್ಕಳು ಗ್ಲಿಸರಿನ್ ಹಾಕಿ ಕೊಂಡು ಬಂದಿದ್ದರೆ? ಹೇಳಿ ಕಿಮ್ಮನೆ ಅವರೇ , ಇಂತಹ ಬರ್ಬರತೆ ಯನ್ನ ಖಂಡಿಸಲು ಒಂದು ಪಕ್ಷದ ಕಾರ್ಯಕರ್ತ ಆಗಿಯೇ ಇರಬೇಕೆ ? ಕಿಮ್ಮನೆ ಅವರಿಗೆ ಅತ್ಯಾಚಾರಿಗಳನ್ನ  ರಕ್ಷಿಸಲು ಇಂತಹ ಉತ್ಸಾಹ ಯಾಕೆ ? ನಂದಿತಾ ಳ ಕೊಲೆಯನ್ನ , ಅಸಹಜ ಸಾವು ಎಂದು ಬಿಂಬಿಸಲು ಕಾರಣ , ಅವರ ಹೃದಯ ಹೀನ ಲೆಕ್ಕಾಚಾರ . ಇಷ್ಟಕ್ಕೂ ಕಿಮ್ಮನೆ ಈ ಕೆಳಮಟ್ಟಕ್ಕೆ ಇಳಿಯಲು ಕಾರಣ , ತಮ್ಮ ಸಮಸ್ತ ಚುನಾವಣಾ ಖರ್ಚು ನೋಡಿಕೊಂಡ ನ್ಯಾಷನಲ್  ಬ್ರದರ್ಸ್ ನ ಋಣ ಸಂದಾಯ ಎಂದು  ಇಡಿ ತೀರ್ಥಹಳ್ಳಿ ಮಾತನಾಡುತ್ತಿದೆ .

ಅತ್ಯಂತ ಸಭ್ಯ ಊರು ಎಂದು ಕರೆಸಿಕೊಳ್ಳುವ ತೀರ್ಥಹಳ್ಳಿಯಲ್ಲಿ , ಹೆಣ್ಣು ಮಕ್ಕಳನ್ನು ದೇಶದ ನಾನಾ  ವೇಶ್ಯಾವಾಟಿಕೆಗೆ ಗೃಹಕ್ಕೆ  ಮಾರುವ ವ್ಯವಸ್ತಿತ ಜಾಲ ಇದೆ .. ಕಳ್ಳ ನೋಟು ಚಲಾವಣೆ ಮಾಡುವ ಜಾಲವಿದೆ , ಶ್ರೀಗಂದ ತೀರುವ ತನಕ ತಿಂದು ತೇಗಿದ ಕಳ್ಳರ ಗುಂಪು ಈಗ , ಮರಗಳ್ಳತನಕ್ಕೆ ಇಳಿದಿದ್ದಾರೆ , ಅಕ್ರಮ ಮರಳು ದಂಧೆ , ಅಕ್ರಮ ಕಲ್ಲು ಗಣಿಗಾರಿಕೆ  ಇದೆ, ಇಷ್ಟೆಲ್ಲಾ ಇದ್ದರು , ಇಲ್ಲಿನ ಪೋಲಿಸ್ ರು ಸುಖ ಜೀವಿಗಳು.. ಯಾವ ಅಕ್ರಮಕ್ಕು ಬ್ರೇಕ್ ಹಾಕಿದ ಉದಾಹರಣೆ ಇಲ್ಲ.. ಆದರೆ ನಂದಿತಾ ಕೊಲೆ , ಪ್ರಕರಣವನ್ನ ಆತ್ಮಹತ್ಯೆ ಎಂದು ನಿರೂಪಿಸಲು ಸಾಕಷ್ಟು ಬೆವರು ಹರಿಸುತ್ತಿರುವುದರ ಹಿಂದಿನ ಗುಟ್ಟು , ಇದೆ ಕಿಮ್ಮನೆ ರತ್ನಾಕರ್ ನ ಅಧಿಕಾರ ಮತ್ತು ನ್ಯಾಷನಲ್ ಬ್ರದರ್ನನ  ಹಣ ಎಂದು ಚಿಕ್ಕ ಮಕ್ಕಳು ಕೂಡ ಹೇಳುತ್ತಿದ್ದಾರೆ...
ಕೆಲವು ವರ್ಷದ ಹಿಂದೆ ತೀರ್ಥಹಳ್ಳಿ ಸುತ್ತಮುತ್ತಲ ಊರುಗಳಾದ , ಕುಂದಾದ್ರಿ ಬೆಟ್ಟಕ್ಕೆ , ಕುಪ್ಪಳಿ ಕಾಡಿಗೆ ಏಕಾಂತ ಅರಸಿ ಬರುತ್ತಿದ್ದ ಯುವ ಜೋಡಿಗಳನ್ನ , ಥಳಿಸಿ , ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಒಂದು ತಂಡವೆ ಅಸ್ತಿತ್ವದಲ್ಲಿತ್ತು , ಕಾಲ ಕ್ರಮೇಣ ಇಂತಹ ಘಟನೆಗೆ ಅಂಜಿದ ಜೋಡಿಗಳು ಅಂತಹ ಜಾಗಕ್ಕೆ ಹೋಗಲು ನಿಲ್ಲಿಸದವೋ , ಆ ತಂಡಗಳು ತಮ್ಮ ಕೆಲಸ ಶುರು ಮಾಡಿದ್ದು ತೀರ್ಥಹಳ್ಳಿ ಊರಿನಲ್ಲಿಯೇ , ಹೈ ಸ್ಕೂಲ್ ಗೆ ಹೋಗುವ  ಹೆಣ್ಣು ಮಕ್ಕಳನ್ನು , ಪರಿಚಯ ಮಾಡಿಕೊಳ್ಳುವುದು , ಅವರಿಗೆ ಮೊಬೈಲ್ , ಚಾಕಲೇಟ್ ಆಸೆ ತೋರಿಸಿ , ಲೈಂಗಿಕವಾಗಿ ಬಳಸಿಕೊಳ್ಳುವುದು , ಮೊಬೈಲ್ , ಚಾಕಲೇಟ್ ಆಮಿಷಕ್ಕೆ ಬೀಳದ ಹುಡುಗಿಯರನ್ನ , ಮಾದಕ ಪದಾರ್ಥ ಕೊಟ್ಟು  ಉಪಯೋಗಿಸಿಕೊಳ್ಳುವುದು , ಅದನ್ನ ವೀಡಿಯೊ ಮಾಡಿ ಬ್ಲಾಕ್ ಮೇಲ್ ಮಾಡುವುದು ... ಇದೆ ಬ್ಲಾಕ್ಮೇಲ್ ಗೆ ಭಯ ಬೀಳುವ ಹೆಣ್ಣು ಮಕ್ಕಳನ್ನ , ಪದೇ ಪದೇ ಸಾಮೂಹಿಕ ಅತ್ಯಾಚಾರಕ್ಕೆ ಇಡು ಮಾಡುವುದು. ಇಂತಹ ಬಹಳಷ್ಟು ಬೆಳಕಿಗೆ ಬಾರದೆ ಮುಚ್ಚಿ ಹೋಗಿವೆ  .. ಈಗ್ಗೆ ಒಂದು ವರ್ಷದ ಹಿಂದೆ ಬೆಳಕಿಗೆ ಬಂದ ಪ್ರಕರಣದಲ್ಲೂ ಹೀಗೆ ಆಗಿತ್ತು , ಪದೇ ಪದೇ ತನ್ನ ಮೇಲೆ ನಡೆದ ದೌರ್ಜನ್ಯ ಸಹಿಸದ ಬಾಲಕಿ , ತನ್ನ ಪೋಷಕರಲ್ಲಿ ಹೇಳಿಕೊಂಡರೆ , ಮರ್ಯಾದೆಗೆ ಅಂಜಿದ ಪೋಷಕರು .. ಆ ವಿಷಯವನ್ನೇ ಮುಚ್ಚಿ ಹಾಕಿದ್ದರು .. ನಂದಿತಾ ಪ್ರಕರಣ ಇದಕ್ಕಿಂತ ಬಿನ್ನವೇನು ಅಲ್ಲ .. ಒಂದು ಪಕ್ಷ ಆಕೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನ , ಕಟ್ಟಿಗೆ ಆರಿಸಲು ಬಂದಿದ್ದ ತುಡ್ಕಿ ಗ್ರಾಮದ ಜನ ನೋಡದೆ ಇದ್ದಿದ್ದರೆ , ಈ ಪ್ರಕರಣ ಕೂಡ ಮುಚ್ಚಿ ಹೋಗುತ್ತಿದ್ದರಲ್ಲಿ ಸಂಶಯ ಇಲ್ಲ.. ತೀರ ಅಸ್ವಸ್ತ ಗೊಂಡಿದ್ದ ಬಾಲಕಿ , ಆಸ್ಪತ್ರೆ ಸೇರಿದ್ದು , ಆಕೆಯ ಮೇಲೆ ದೌರ್ಜನ್ಯ ನಡೆದಿದ್ದು ಬೆಳಕಿಗೆ ಬಂದಿದ್ದೆ , ಆಕೆ ಸತ್ತ ನಂತರ ... ತೀರ್ಥಹಳ್ಳಿ ಪೊಲೀಸರು ಎಷ್ಟರ ಮಟ್ಟಿಗೆ ಕ್ರಿಯಾಶೀಲರು ಅಂದರೆ , ನಂದಿತಾ ಳ ತಂದೆ ಬಂದು ಕಂಪ್ಲೇಂಟ್ ಕೊಡುವವರೆಗೂ , ಕುರ್ಚಿಗೆ ಹೊಡಿಸಿಕೊಂಡಿದ್ದ ಮೊಳೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಮಾಡಿರಲಿಲ್ಲ .
ನಂದಿತಾ ಳ ಕೊಲೆ ಪ್ರಕರಣ ಮುಚ್ಚಿ ಹಾಕಲು ಮೊದಲು ತೇಲಿಸಿದ ಕಥೆ ಏನೆಂದರೆ “ ನಂದಿತಾ ಳಿಗೂ ಕೊಲೆ ಆರೋಪಿ ಹುಡುಗನಿಗೂ ಆಕೆಗೂ ಅನೈತಿಕ ಸಂಭಂದ ಇತ್ತು, ಆಕೆಯ ಇಚ್ಛೆ ಮೇರೆಗೆ ಆನಂದ ಗಿರಿಯಲ್ಲಿ , ಇಬ್ಬರು ಕೇಳಿಯಲ್ಲಿ ತೊಡಗಿದ್ದರು ಅದನ್ನ ಕಂಡ ಗ್ರಾಮಸ್ತರು ಆಕೆಯ ಮನೆಗೆ ವಿಷಯ ತಿಳಿಸಿದ್ದಾರೆ , ಮನೆಗೆ ಕರೆದುಕೊಂಡ ಪೋಷಕರು ಆಕೆಗೆ ಥಳಿಸಿದ್ದಾರೆ , ಆ ಅವಮಾನಕ್ಕೆ ಅಂಜಿದ ಹುಡುಗಿ ವಿಷ ಸೇವೆಸಿ ಪ್ರಾಣ ಬಿಟ್ಟಿದ್ದಾಳೆ “.- ಮನುಷ್ಯತ್ವ ಇರುವ ಯಾರಾದರು ಆಡುವ ಮಾತ ಇದು ? ೧೩ ವಯಸ್ಸಿನ ಹುಡುಗಿಯನ್ನ ಅನಾಯಾಸವಾಗಿ ಅನೈತಿಕತೆಗೆ ಇಳಿಸಿ ಬಿಟ್ಟರು .. ಆದರೆ ಬಾಲಕಿ ಮೇಲೆ ನಡೆಯುವ ಸಮ್ಮತಿ ಕಾಮ ಕೂಡ ಅತ್ಯಾಚಾರ ಅನ್ನಿಸಿಕೊಳ್ಳುತ್ತದೆ ಅಂತ ಯಾವಾಗ ಈ ದುರುಳರಿಗೆ ಹೊಳೆಯಿತೋ ತಕ್ಷಣ ಕಥೆ ಬದಲಾವಣೆ ಆಯ್ತು.
ಈಗ ಚಾಲ್ತಿಯಲ್ಲಿರುವ ಕಥೆ ಪ್ರಕಾರ “ ನಂದಿತಾ ತಾನು ಸರಿಯಾಗಿ ಓದುತ್ತಿಲ್ಲ ಅಂತ ಅರಿವಾಗಿ (ನೆನಪಿರಲಿ ಪರೀಕ್ಷೆ ನಡೆಯಲು ಇನ್ನು ೫ ತಿಂಗಳು ಬಾಕಿ ಇದೆ ) ಒಂದು ಪತ್ರವನ್ನ ಸ್ವಚ್ಛ ಕನ್ನಡದಲ್ಲಿ ಟೈಪ್ ಮಾಡಿಸಿ , ಪ್ರಿಂಟ್ ತೆಗಿಸಿ , ಬ್ಯಾಗ್ ನಲ್ಲಿ ಇಟ್ಟುಕೊಂಡು , ಆನಂದ ಗಿರಿಗೆ ಹೋಗಿ ವಿಷ ತೆಗೆದು ಕೊಂಡಳಂತೆ .. – ೧೩ ವರ್ಷದ ಬಾಲಕಿ ಡೆತ್ ನೋಟ್ ಟೈಪ್ ಮಾಡಿಸಿ ಇಟ್ಟುಕೊಳ್ಳುವುದು ಸಾದ್ಯವೇ ಎಂದು ಎಲ್ಲ ಕ್ಯಾಕರಿಸಿ ಉಗಿದ ಮೇಲೆ , ಪೊಲೀಸರು ತೀರಿ ಕೊಂಡ, ಹುಡುಗಿಯನ್ನ ಮತ್ತೆ ಬದುಕಿಸಿ , ಆಕೆಯ ಕೈಯಿಂದ ಮತ್ತೊಂದು ಡೆತ್ ನೋಟ್ ಬರೆಸಿ , ಹಾಜರು ಪಡಿಸಿದ್ದಾರೆ ... ಆಹಾ ಒಂದು ಕೇಸ್ ಮುಚ್ಚಿ ಹಾಕಲು ಎಂತ ಪ್ರಯತ್ನ .. ಇವರೇನು ತಿರ್ಥಹಳ್ಳಿಯ ಜನರನ್ನ ಮೂರ್ಖರು ಅಂತ ಭಾವಿಸಿದ್ದಾರೆ ಅಂತ ಅನ್ನಿಸುತ್ತದೆ . ಮಾದ್ಯಮಕ್ಕೆ ಬಿಡುಗಡೆ ಮಾಡಿದ್ದ ಟೈಪ್ ಮಾಡಿದ ಪತ್ರ & ಅದು ಸರಿಯಾಗಿಲ್ಲ ಎಂದು ಅದರ ಹಿಂದೆಯೇ ಬಂದ ಹಸ್ತಾಕ್ಷರ ದ ಪತ್ರ  ಯಾರ ಸೃಷ್ಟಿ ಅಂತ ಹೊಸದಾಗಿ ಹೇಳಬೇಕಿಲ್ಲ ಅಲ್ಲವೇ ?

ಪ್ರೀತಿಯ ಕಿಮ್ಮನೆ ಅವರೇ , ನಿಮ್ಮಿಂದ ಈ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ದಿ ಕಾರ್ಯ ಆಗಲಿಲ್ಲ , ತೀರ್ಥಹಳ್ಳಿಯ ಇಡಿ ತಾಲೂಕಿಗೆ ಒಂದೇ ಒಂದು ಮಾದರಿ ಶಾಲೆ ಮಾಡಲು ನಿಮ್ಮ ಕೈಯಲ್ಲಿ ಆಗಲಿಲ್ಲ .. ನಿಮ್ಮದೇ ಮೂಗಿನಡಿಯ ಶಾಲೆಗಳಲ್ಲಿ ಅತ್ಯಾಚಾರ ನಡೆಯುತ್ತಿದ್ದರು ನಿಮ್ಮಿಂದ ಅದನ್ನ ನಿಲ್ಲಿಸಲು ಆಗಲಿಲ್ಲ , ಇಷ್ಟೆಲ್ಲಾ ಇದ್ದರು ನಾವು ನಿಮ್ಮ ಕೊರಳ ಪಟ್ಟಿ ಹಿಡಿದು ಕೇಳಿರಲಿಲ್ಲ ... ಆದರೆ ಇಂದು ನೀವು ರಕ್ಷಿಸಲು ಪ್ರಯತ್ನಿಸುತ್ತಿರುವುದು , ಒಂದು ಎಳೆ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿದ ಕಾಮುಕರನ್ನ .. ಅವರು ಯಾವುದೇ ಧರ್ಮಕ್ಕೆ ಸೇರಿರಲಿ , ಎಷ್ಟೇ ಶ್ರೀಮಂತರಿರಲಿ .. ಆ ಹೆಣ್ಣು ಮಗಳ ಘೋರ ಸಾವಿಗೆ ಬೆಲೆ ಕೊಡಿ .. ನಿಮ್ಮ ಮಗಳ ಮೇಲೆಯೇ ಇಂತಹದೊಂದು ದೌರ್ಜನ್ಯ ನಡೆದಿದ್ದರೆ , ನಿಮ್ಮ ನಡೆ ಹೀಗೆಯೇ ಇರುತ್ತಿತ್ತೆ ? , ನಮ್ಮ ಸಹನೆಗೂ ಒಂದು ಮಿತಿ ಇದೆ , ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಈಗಲೇ ಕೈ ಬಿಡಿ.. ಇಲ್ಲದೆ ಹೋದರೆ ತೀರ್ಥಹಳ್ಳಿ ರಾಜಕೀಯ ಇತಿಹಾಸದಲ್ಲೇ ನೀವೊಬ್ಬ , ಆಯೋಗ್ಯ , ಭ್ರಷ್ಟ , ಚಾರಿತ್ರ್ಯ ಹೀನ ರಾಜಕಾರಣಿ ಆಗಿ ದಾಖಲಾಗುತ್ತಿರ  ಎಂಬುದು ನೆನಪಿರಲಿ .. ನಿಮ್ಮನ್ನು ಬೆಂಬಲಿಸಲು , ನಿಮ್ಮದೇ ಪಕ್ಷದ ಯಾರೊಬ್ಬರು ಕೂಡ ಮುಂದೆ ಬರುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕಿರಲಿ ..

ಕೊನೆಯದಾಗಿ , ಪ್ರೀತಿಯ ನಂದಿತಾ, ಮತ್ತೆ ಹುಟ್ಟಿ ಬಾ ಎಂದು ಹೇಳುವ ಯೋಗ್ಯತೆ ನಮಗಿಲ್ಲ .. ನಿನ್ನ ಈ ಜನ್ಮದಲ್ಲೇ ಘೋರ ಸಾವಿನಿಂದ ತಪ್ಪಿಸಲು ಆಗದ ನಮಗೆ , ನಿನ್ನ ಮುಂದಿನ ಜನ್ಮದ ಬಗ್ಗೆ ಹೇಳುವ ಯಾವ ಯೋಗ್ಯತೆ ಇದೆ ? , ನಿನ್ನ ಸಾವಿನಲ್ಲಿ ಬೇಳೆ ಬೇಯಿಸಲು ಪ್ರಯತ್ನಿಸುತ್ತಿರುವ ಕಿಮ್ಮನೆ ಅಂತಹ ನೀಚ ರಾಜಕಾರಣಿಯ ಮೇಲೆ, ನಿನ್ನ ಗೋರಿಯ ಮೇಲೆ ಹಣ ಮಾಡಲು ಹೊರಟಿರುವ ಪೋಲೀಸರ ಮೇಲೆ , ನಿನ್ನ ಸಾವಿಗೂ ಬೆಲೆ ಕಟ್ಟಿ , ಪ್ರಕರಣವನ್ನೇ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ದುಷ್ಟರ ಮೇಲೆ  ನಿನ್ನ ಬಿಸಿ ಕಣ್ಣಿರ ಶಾಪ ತಗುಲಲಿ ..
 ನಿನ್ನ ಅನ್ಯಾಯದ ಸಾವಿಗೆ, ನಿನ್ನ ಉಳಿಸಿಕೊಳ್ಳಲು ಆಗದ ನಮ್ಮ ಅಸಹಾಯಕತೆಗೆ , ನನ್ನ ಎರಡು ಕಂಬನಿ ಹನಿಗಳು ಮೀಸಲು ..