ಭಾನುವಾರ, ಸೆಪ್ಟೆಂಬರ್ 22, 2013

ಭಾಷಾ ಚಳುವಳಿಗಳು ಮತ್ತು ನವ ವರ್ಣಾಶ್ರಮ

ಇತ್ತೀಚಿಗೆ ಒಂದು ವಿಶಿಷ್ಟ ಚರ್ಚೆಯಲ್ಲಿ ನಾನು ಭಾಗವಹಿಸಬೇಕಾದ ಅನಿವಾರ್ಯತೆಗೆ  ಸಿಲುಕಬೇಕಾಯಿತು , ಅದೇನೆಂದರೆ ಭಾಷಾ  ಪ್ರಾಮುಖ್ಯ ಚಳುವಳಿಗಳು ಹೇಗೆ ನವ ವರ್ಣಾಶ್ರಮವನ್ನ ಹುಟ್ಟುಹಾಕುತ್ತದೆ ಎಂದು.. ಈ ತರಹದ ಚರ್ಚೆಗೆ ಕಾರಣವಾದವರು ಕರವೇ ಸಂಘಟನೆಯ ಶ್ರೀಯುತ ದಿನೇಶ್ ಕುಮಾರ್ ಅವರು.  ಫೇಸ್ಬುಕ್ ನಲ್ಲಿ ಅವರು ಹಾಕಿದ್ದ ಒಂದು ಪೋಸ್ಟ್ ಮುಖಾಂತರ ಶುರುವಾದ ಚರ್ಚೆಯನ್ನು ಶ್ರೀಯುತರು ಮುಂದುವರಿಸಲು ಇಷ್ಟ ಪಡಲಿಲ್ಲ , ತೀರ ಒತ್ತಾಯ ಮಾಡಿದ್ದಕ್ಕೆ ನಾನು ಅವರಿಂದ ಅಸೃಷ್ಯ ಆಗಬೇಕಾಯಿತು.  ಇರಲಿ . ಅವರ ಪ್ರಕಾರ ಮನುಷ್ಯರ ಎರಡು ಕೈಗಳಲ್ಲಿ ಬಲಗೈ ಎಡಗೈ ಗಿಂತ ಶ್ರೇಷ್ಠ ಅನ್ನುವುದು ವರ್ಣಾಶ್ರಮದ ಪ್ರತೀಕ. ನಿಜ ಯಾವುದೋ ಒಂದನ್ನು ಇನ್ನೊಂದಕ್ಕೆ ಹೋಲಿಸಿ ಶ್ರೇಷ್ಠ ಅಥವಾ ನಿಕೃಷ್ಟ ಅನ್ನುವುದು ತಪ್ಪು ಆದರೆ ... ತಮ್ಮದೇ ಕೈಗಳ ಬಗ್ಗೆ ಇಷ್ಟು ಸ್ಮೂಕ್ಷ್ಮತೆ ಹೊಂದಿರುವ ಶ್ರೀಯುತರು ತಮ್ಮದೇ ಹೋರಾಟ ಹೇಗೆ ವರ್ಣಾಶ್ರಮ ಹುಟ್ಟುಹಾಕುತ್ತಿದೆ ಅನ್ನುವುದು ತಿಳಿದಿರಲಾರರೆ ..? ಇರಲಿ

ಭಾಷಾ ಚಳುವಳಿ ವಿಷಯಕ್ಕೆ ಬಂದರೆ ಮುಖ್ಯವಾಗಿ ಚರ್ಚೆಗೆ ಬರುವವರು ಇಬ್ಬರು ಒಬ್ಬರು ದ್ರಾವಿಡ ತಮಿಳು ಹೋರಾಟಗಾರ ಪೆರಿಯಾರ್ , ಮತ್ತೊಬ್ಬರು ಮರಾಟಿ  ಭಾಷಾ ಹೋರಾಟಗಾರ ಬಾಳ್ ಠಾಕ್ರೆ.

ಪೆರಿಯಾರ್ ಒಬ್ಬ ನಾಸ್ತಿಕ , ವೈದಿಕ ಸಮಾಜ , ಬ್ರಾಹ್ಮಣರನ್ನ ದ್ವೇಷಿಸುತ್ತಿದ್ದ ವ್ಯಕ್ತಿ , ಅದು ಎಷ್ಟರ ಮಟ್ಟಿಗೆ ಅಂದರೆ " ಒಬ್ಬ ಬ್ರಾಹ್ಮಣ ಮತ್ತು ಒಂದು ಹಾವು ಎದುರಿಗೆ ಬಂದರೆ , ಮೊದಲು ನಾನು ಕೊಲ್ಲುವುದು  ಬ್ರಾಹ್ಮಣನನ್ನ" ಅನ್ನುವಷ್ಟು. ಪೆರಿಯಾರ್ ಹಿಂದೂ ಸಮಾಜದಲ್ಲಿದ ಮೇಲು ಕೀಳು, ಬ್ರಾಹ್ಮಣ್ಯದಂತಹ ವಿಷಯಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು , ಅದರ ವಿರುದ್ದ ಅವರು " ಸ್ವಾಭಿಮಾನ ಚಳುವಳಿಗೆ" ಕರೆಕೊಟ್ಟವರು, ಹಾಗೆಯೇ  ತಮಿಳರ ಮೇಲಿನ ಹಿಂದಿ ಹೇರಿಕೆ, ಆರ್ಯರ ( ಉತ್ತರ ಭಾರತೀಯರ) ವಿರುದ್ದದ ಚಳುವಳಿಗಳನ್ನ ವ್ಯಾಪಕವಾಗಿ ನಡೆಸಿದವರು. ಒಂದು ಸಮಯದಲ್ಲಿ ಆರ್ಯರ ದೇವರುಗಳು ಕರೆಯಲ್ಪಡುತಿದ್ದ ರಾಮ ಕೃಷ್ಣರ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸುತ್ತಿದ್ದರು ಪೆರಿಯಾರ್.
ಹಿಂದಿ ಹೇರಿಕೆಯಿಂದ ದ್ರಾವಿಡರ ಸಂಸ್ಕೃತಿಯನ್ನ  ಆರ್ಯರು ಕಲುಷಿತಗೊಳಿಸಲು ಪ್ರಯತಿಸುತ್ತಿದ್ದಾರೆ  ಅನ್ನುವುದು ಪೆರಿಯಾರ್ ಅವರ ವಾದವಾಗಿತ್ತು... ಅವರ ದ್ರಾವಿಡ ಚಳುವಳಿ ತಮಿಳು ನಾಡಿನ ಮಟ್ಟಿಗೆ ಒಂದು ಕ್ರಾಂತಿಗೆ ಕಾರಣವಾಯಿತು ಆದರೆ ....    ಯಾವ ದಿಕ್ಕಿನಿಂದ ನೋಡಿದರು ಪೆರಿಯಾರ್ ಮಾಡಿದ್ದು ಅದೇ ವರ್ಣಾಶ್ರಮದ ಸಮರ್ಥನೆಯೇ.  ಒಂದು ಕಡೆ ಬ್ರಾಹ್ಮಣರ ಮೇಲೆ ದ್ವೇಷ,  ಇನ್ನೊಂದು ಕಡೆ ತಮಿಳೇತರ  ಮೇಲೆ ಅಸಮಾಧಾನ ಇದು ಹೇಗೆ ಸಾಧ್ಯ ?. ಒಬ್ಬ ತಮಿಳು ಬ್ರಾಹ್ಮಣನನ್ನ ಆತ  ಬ್ರಾಹ್ಮಣ ಅನ್ನೋ ಕಾರಣಕ್ಕೆ ದ್ವೇಷಿಸಬೇಕಾ ? ಅಥವಾ ಆತ  ತಮಿಳಿಗ ಅನ್ನೋ ಕಾರಣಕ್ಕೆ ಅಪ್ಪಿಕೋಬೇಕ  ?  ಅಥವಾ ಆರ್ಯ ದಲಿತನನ್ನ ಆತ  ದಲಿತ ಅನ್ನೋ ಕಾರಣಕ್ಕಾಗಿ ಇಷ್ಟ ಪಡಬೇಕ ? ಅಥವಾ ಒಬ್ಬ ಆರ್ಯ ಅನ್ನೋ ಕಾರಣಕ್ಕೆ ದ್ವೇಷಿಸಬೇಕ ? ಬಹುಶ ಈ ವಿಷಯದ ಮೇಲೆ ಪೆರಿಯಾರ್ ಮಾತಾಡಿದ್ದು ನಾನು ಕೇಳಿಲ್ಲ.

ಬಾಳ್ ಠಾಕ್ರೆ ಯವರ ಶಿವಸೇನೆಯದು  ಇನ್ನೊಂದು ಮುಖ, ಒಂದು ಕಡೆ ಮರಾಟಿ ಗರೆಲ್ಲ ಒಂದಾಗಬೇಕು, ಆದರೆ ಅದರಲ್ಲಿ ಮುಸ್ಲಿಮರು ಹೊರತಾಗಬೇಕು ... ಇದು ಹೇಗೆ ಸಾದ್ಯ ? ಮರಾಟಿಗ ಅಥವಾ ತಮಿಳಿಗ  ಅಂದ ಮೇಲೆ ಮುಗಿಯಿತು ಆತ  ಹಿಂದುವೋ ಮುಸ್ಲಿಮನೋ ಪಾರ್ಸಿಯೋ, ಬ್ರಾಹ್ಮಣನೋ , ದಲಿತನೋ . ಆತನ ಧರ್ಮ, ಜಾತಿ  ಅಲ್ಲಿ ಮುಖ್ಯವಾಗಬಾರದು ಅಲ್ಲವೇ  ..?
ಈ ಜಿಜ್ನಾಸೆಯ ಬಗ್ಗೆ ಇನ್ನು ಹೇಳಬೇಕು ಅಂದರೆ ರೈತ ಸಂಘದ ವಿಷಯದಲ್ಲಿ ತೇಜಸ್ವಿ ಅವರಿಗೆ ಮತ್ತು ದೇವನೂರು ಅವರಿಗೆ ಇದ್ದ ಭಿನ್ನಾಭಿಪ್ರಾಯ ಉಲ್ಲೆಕಿಸಬಹುದು, ರೈತ ಸಂಘದಲ್ಲಿ ಮೀಸಲಾತಿ ಇರಬಾರದು, ರೈತರು ಅಂದ ಮೇಲೆ ಎಲ್ಲರು ಒಂದೇ  ಅನ್ನುವುದು ತೇಜಸ್ವಿ ಅವರ ವಾದ ಆದರೆ , ಮೇಲ್ಜಾತಿಯ ರೈತ , ದಲಿತ ರೈತನ ಶೋಷಣೆ ಮಾಡಬಹುದು, ಹಾಗಾಗಿ ರೈತ ಸಂಘದಲ್ಲಿ ಮೀಸಲಾತಿ ಬೇಕು ಅನ್ನುವುದು ದೇವನೂರರ ವಾದ. ಕೊನೆಗೆ ಈ ಜಿಜ್ನ್ಯಾಸೆ ರೈತ ಸಂಘದ ಸಮಾಪ್ತಿಯೊಂದಿಗೆ ಪರ್ಯವಪಸನಗೊಂಡಿದ್ದು ವಿಪರ್ಯಾಸ.
ಭಾಷೆ ಅನ್ನುವುದು ಹುಟ್ಟಿದ್ದೇ ಸಂವಹನಕ್ಕಾಗಿ, ಕನ್ನಡ ಪರಿಸರದಲ್ಲಿ ಹುಟ್ಟಿದ್ದ ನನಗೆ ಕನ್ನಡ ಕಲಿಯುವುದು ದೊಡ್ಡ ಸಾಧನೆ ಆಗಿರಲಿಲ್ಲ ಅದು ನನ್ನ ಅನಿವಾರ್ಯತೆ ಆಗಿತ್ತು ... ಹಾಗೆಯೇ ನಾನು ತಮಿಳು ಪರಿಸರದಲ್ಲಿ ಹುಟ್ಟಿದ್ದರೆ ನನ್ನ ಭಾಷೆ ತಮಿಳ್ ಆಗಿರುತ್ತಿತ್ತು, ಇದರಲ್ಲಿ ಶ್ರೇಷ್ಠತೆ ಏನಿದೆ ? ಯಾರು ಕೂಡ ಇಲ್ಲೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು  ಅಂತ ಅರ್ಜಿ ಹಾಕಿರುವುದಿಲ್ಲ, ಹಾಗಾದರೆ ನಮ್ಮ ಹುಟ್ಟು ಆಗಲಿ ಅಥವಾ ನಾವು ಆಡುವ ಮಾತಾಗಲಿ ನಮಗೆ ಶ್ರೇಷ್ಠತೆ ತಂದು ಕೊಡುವುದು ಹೇಗೆ ?
ಮಹಾರಾಷ್ಟ್ರದಲ್ಲಿ ಮರಾಟಿಗ ಶ್ರೇಷ್ಠ , ತಮಿಳುನಾಡಲ್ಲಿ ತಮಿಳಿಗ ಶ್ರೇಷ್ಠ , ಕರ್ನಾಟಕದಲ್ಲಿ ಕನ್ನಡಿಗ ಶ್ರೇಷ್ಠ .. ಇದು ವರ್ಣಶ್ರಮವಲ್ಲದೆ  ಇನ್ನೇನು ?
ಕನ್ನಡವನ್ನ ಧರ್ಮ ಎಂದು ಸ್ವೀಕರಿಸುವ , ಕನ್ನಡಕ್ಕೆ ಚ್ಯುತಿ ಬಂದರೆ ಜೀವ ಕೊಡುತ್ತೇವೆ ಅನ್ನುವವರಿಗೂ ,  ಹಿಂದೂ ಧರ್ಮಕ್ಕೆ ಚ್ಯುತಿ ಬಂದರೆ ಜೀವ ಕೊಡಲು ಸಿದ್ದ ಅನ್ನುವ RSS ಸಂಘ ಪರಿವಾರಗಳಿಗೆ ಏನು ವ್ಯತ್ಯಾಸ ? . RSS  ದು ಹಿಂದೂ ಕೋಮುವಾದ ಆದರೆ ಇವರದು ಕನ್ನಡ ಕೋಮುವಾದವೇ ?
ಕರ್ನಾಟಕದಲ್ಲಿ ಕನ್ನಡಿಗ ನೆಲೆ ಕಳೆದುಕೊಳ್ಳುತ್ತಿದ್ದಾನೆ ಅನ್ನುವಾಗ ಆಗುವ ನೋವು , ಹಿಂದೂಗಳು ಹಿಂದೂಸ್ಥಾನದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ ಅನ್ನುವ ನೋವಿಗಿಂತ ಹೇಗೆ ಬಿನ್ನ ?
ಇದು ಸಂಘಟನೆಗಳ ಸೈದ್ದಂತಿಕ ಘರ್ಷಣೆ ಅನ್ನಬಹುದು, ಎಂದಿಗೂ ಭಾಷೆ ನಮ್ಮ ಧರ್ಮ ಆಗಬಾರದು , ಮತ್ತು ಧರ್ಮ ನಮ್ಮ ಭಾಷೆ ಆಗಬಾರದು ... ಇದು ಸೈದ್ದಾಂತಿಕ ಗೊಂದಲ ಅನ್ನದೆ ಬೇರೆ ದಾರಿ ಇಲ್ಲ . ನಾನು ಕನ್ನಡ ಪರ  ಹೋರಾಟವನ್ನ ತಪ್ಪು ಅನ್ನುತ್ತಿಲ್ಲ ಆದರೆ ದಿನೇಶ್ ಕುಮಾರ್ ಅಂತವರು RSS  ಸಂಘಟನೆಗಳು ಮಾಡುತ್ತಿರುವ ಕೆಲಸವನ್ನ ಖಂಡಿಸುವ ಮುನ್ನ ತಾವು ಮಾಡುತ್ತಿರುವುದೇನು ಅನ್ನುವುದನ್ನ ಯೋಚಿಸಬೇಕು.. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವುದರ ಪರಿಣಾಮ ಅರಿತರೆ ಒಳ್ಳೆಯದು

ತಮಿಳುನಾಡಿಗೆ , ಮಹಾರಾಷ್ರಕ್ಕೆ ಹೋಲಿಸಿದರೆ ಕರ್ನಾಟಕ ಭಾಷಾಭಿಮಾನ ವಿಷಯದಲ್ಲಿ ದುರುದೃಷ್ಟ ರಾಜ್ಯ ಅನ್ನಬಹುದು, ಎರಡು ರಾಜ್ಯಗಳು ಭಾಷೆಯನ್ನ ತಳಹದಿ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಂಡರೆ ಈ ರಾಜ್ಯದ ಜನ ಬಾಯಿ ಬಿಟ್ಟು ನೋಡುವುದು ಬಿಟ್ಟು ಇನ್ನೇನು ಮಾಡಲಾಗದ ಅಸಹಾಯಕತೆ ಹೊದ್ದು ಕೊಂಡರು  ಅಷ್ಟೇ... ಬೀದಿ ಬೀದಿಗೆ ಒಬ್ಬರು ಕನ್ನಡ ಹೋರಾಟಗಾರರು ಸಿಗುವ ಈ ನಾಡಿನಲ್ಲಿ ಕನ್ನಡ ಉದ್ದಾರ ಮಾಡಿದವರು ಎಷ್ಟು ಭಗವಂತ ಬಲ್ಲ. ಕನ್ನಡ ಕಾಳಜಿ ಬಿಟ್ಟು ಮತ್ತೆಲ್ಲ ಮಾತಾಡುವ ಚಂಪಾ , ನ್ಯೂಸ್ ಚಾನೆಲ್ ಗಳ ಪಾಲಿಗೆ ಜೋಕೆರ್ ತರಹ ಆಗಿರುವ ವಾಟಾಳ್ , ಕನ್ನಡವನ್ನೇ ಸರಿಯಾಗಿ ಮಾತಾಡಲು ಬಾರದ ನಾರಾಯಣ ಗೌಡರು ಇವರನ್ನೆಲ್ಲ ಕನ್ನಡದ ಕಟ್ಟಾಳುಗಳು ಅನ್ನೋ ಮನಸ್ಸು .. ಇವರ ಕೈಗೆ ನಮ್ಮ ಕನ್ನಡ ಅಭಿಮಾನ ಕೊಡಬಹುದು ಅನ್ನಿಸುತ್ತದೆಯೇ ?
ಕನ್ನಡ ರಕ್ಷಣೆ ಒಂದೇ ಗುರಿ ಆಗಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಇಷ್ಟೊಂದು ಬಣಗಳೇಕೆ ? ಪ್ರತಿಭಟನೆ ಒಂದು ಬಿಟ್ಟರೆ ಈ ಬಣಗಳು ಮಾಡಿರುವ ಘನಂದಾರಿ ಕೆಲಸವಾದರೂ ಏನು ? ಹೆಸರು ಕನ್ನಡ ಹೋರಾಟ ಆದರೆ ಬ್ಯಾನೆರ್ ತುಂಬಾ ಇವರದೇ ಮುಖ , ಇದು ಕನ್ನಡ ಅಭುದ್ಯಕ್ಕಾಗಿ  ಹೋರಾಟವೋ ಸ್ವಾಭುದ್ಯಕ್ಕಾಗಿ ಹೋರಾಟವೋ ?




ಬರಿ ಭಾಷಣದಲ್ಲಿಯೇ  ಮರಾಟಿಗರ , ತಮಿಳಿಗರ ಸ್ವಾಭಿಮಾನ ಕೆರಳಿಸುತ್ತಿದ್ದ ಪೆರಿಯಾರ್, ಠಾಕ್ರೆಗೆ ಸಮನಾದ ಒಬ್ಬನೇ ಒಬ್ಬ ಸೊ ಕಾಲ್ಡ್ ಕನ್ನಡ ಹೋರಾಟಗರ ಈ ರಾಜ್ಯದಲ್ಲಿ ಇಲ್ಲ.
ಕಾವೇರಿ ಹೋರಾಟಕ್ಕೆ ಕರಾವಳಿಗರ ಬೆಂಬಲ ಸಿಗದು, ಮಲಯಾಳಿಗಳ ದೌರ್ಜನ್ಯ ವಿರುದ್ದದ ಕೂಗು ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರಬರದು, ಬೆಂಗಳೂರಿಗರ ತಮಿಳರ ಸಮಸ್ಯೆ , ಉತ್ತರ ಕರ್ನಾಟಕವನ್ನ ಬಾದಿಸದು, ಅವರ ಕೃಷ್ಣೆಯ ಕೂಗು ಬೆಂಗಳೂರು ಗೆ ತಲುಪದು. ಇಡಿ ಕರ್ನಾಟಕವನ್ನ ಒಂದೇ ಅನ್ನಿಸುವ ಭಾವನೆ ಬರಿಸಲು ಇವರ್ಯರಿಂದಲೂ ಸಾದ್ಯವಿಲ್ಲ.  
ಕನ್ನಡ ಸಂಘಟನೆಗಳು ಎಷ್ಟು ಕನ್ನಡ ಶಾಲೆಗಳನ್ನ ಪೋಷಿಸುತ್ತಿವೆ ? ಎಷ್ಟು ಕನ್ನಡ ಪುಸ್ತಕ ಪ್ರಕಟಿಸುತ್ತಿವೆ ? ಶಿವಸೇನೆಯ ಮುಖವಾಣಿ "ಸಾಮಾನ" ಸಾವಿರಾರು ಪ್ರತಿ ಮಾರಟವಾಗುತ್ತದೆ, ಆದರೆ ಕರವೇಯಾ "ನಲ್ನುಡಿ " ಕಣ್ಣಿಗೂ ಕಾಣದ ಗುಪ್ತಗಾಮಿನಿ ಆಗಿದೆ. ಕಣ್ಣಿಗೆ ಕಾಣದ ಪತ್ರಿಕೆಗೆ ಒಬ್ಬ ಸಂಪಾದಕರು ಬೇರೆ .  ಹಾಗಾದರೆ ಕನ್ನಡದ ಹೆಸರಲ್ಲಿ ಈ ಸಂಘಟನೆಗಳು  ಮಾಡುತ್ತಿರುವುದಾದರೂ ಏನು ?
ಹಾಲಿ ಮಂಡ್ಯ ಸಂಸದೆ ರಮ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಂತಿನಗರದಲ್ಲಿ ಮಾಡಿದ ತಮಿಳು ಭಾಷಣ  ನೆನಪಿರಬಹುದು.  ಅಂದು ಅಬ್ಬರಿಸಿದ್ದ ನಾರಾಯಣ ಗೌಡರನ್ನು ಆಕೆ ನೇರ ನೇರ ಹೀಗೆ ಟೀಕಿಸಿದ್ದರು , ಆದರೆ ನಾರಾಯಣ ಗೌಡರು ಮಾಡಿದ್ದೇನು ? ಆಕೆಯ ವಿರುದ್ದ ಉಗ್ರ ಹೋರಾಟ ದ ಬೆದರಿಕೆ ಹಾಕಿದ್ದ ಅವರು, ಆಕೆ ಮಂಡ್ಯ ಲೋಖಸಭಾ ಚುನಾವಣೆಗೆ ನಿಂತರೆ ಕಮಕ್ ಕಿಮಕ್ ಅನ್ನಲಿಲ್ಲ. ಕೊನೆಯ ಪಕ್ಷ ಆಕೆ ಹೇಳಿದಂತೆ ತನ್ನ ಮಕ್ಕಳು ಇಂಗ್ಲಿಷ್ ಮಾದ್ಯಮದಲ್ಲಿ ಓದುತ್ತಿಲ್ಲ ಅಂತ ಕೂಡ ಹೇಳಲಿಲ್ಲ , ಅಲ್ಲಿಗೆ ಮೌನಂ ಸಮ್ಮತಿ ಲಕ್ಷಣಂ ಅಂದ ಹಾಗಾಯ್ತು ಅಲ್ಲವೇ ?



ಚುನಾವಣಾ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಸಿಕ್ಕ ೪೨.೫ ಲಕ್ಷ ಅಕ್ರಮ ಹಣದ ಬಗ್ಗೆ ನಾರಾಯಣ ಗೌಡರು ಗುಲ್ಲಗದಂತೆ ನೋಡಿಕೊಂಡರು. ಸಾಮಾನ್ಯನೊಬ್ಬ ಒಂದು ರುಪಾಯಿ ಕದ್ದು ಸಿಕ್ಕಿಬಿದ್ದರು ಗಂಟೆಗಟ್ಟಲೆ ತೋರಿಸುವ ಕನ್ನಡ ಚಾನೆಲ್ ಗಳು ಯಾಕೆ ಸುಮ್ಮನಾದವು ಅನ್ನುವುದು ಗೊತ್ತಿಲ್ಲದ ಸಂಗತಿ ಅಲ್ಲ .  ನಾರಾಯಣ ಗೌಡರು ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆ ಅನ್ನುವುದು ಗುಟ್ಟಾದ ಸಂಗತಿ ಏನಲ್ಲ.



ತಮಿಳ್ ಚಿತ್ರ ಕನ್ನಡಕ್ಕೆ ರೀಮೇಕ್ ಮಾಡಿ , ಏನೋ ಮಾಡಿದೆ ಎಂದು ಬೀಗುವ ಪ್ರವೀಣ್ ಶೆಟ್ಟಿ, ಯುವಕರಿಗೆ ಕೆಲಸ ಕೊಡಿಸುತ್ತೇನೆ ಎಂದು ದುಡ್ಡು ತಿಂದು ಕೊನೆಗೆ ಅಥಣಿಯಲ್ಲಿ ಪೆಟ್ಟು ತಿಂದ ನವ ನಿರ್ಮಾಣ ಸೇನೆಯ ಭೀಮ ಶಂಕರ ಪಾಟಿಲ್, ಇವರ್ಯಾರು ಕನ್ನಡಕ್ಕಾಗಿ ಹೋರಾಟ ಮಾಡಲು ಬಂದವರಂತೆ ಕಾಣಿಸುತ್ತಿಲ್ಲ.. ಕನ್ನಡ ತಾಯಿ ಇವರೆಲ್ಲರ ಪಾಲಿಗೆ ಅನ್ನದಾತೆ ಆಗಿದ್ದಾಳೆ ಅಷ್ಟೇ . 

ನಿಜ ಹೇಳಬೇಕು ಅಂದರೆ ಇವರ್ಯಾರಿಗೂ ಕನ್ನಡದ ಬಗ್ಗೆ ಕನ್ನಡ ರಕ್ಷಣೆ ಬಗ್ಗೆ ಮಾತನಾಡುವ ಯೋಗ್ಯತೆ  ಇಲ್ಲ, ಕನ್ನಡ ಹೋರಾಟದ ಮುಖವಾಡ  ಹೊತ್ತು ತಮ್ಮ ಬೇಳೆ  ಬೇಯಿಸಿಕೊಳ್ಳಲು ಪ್ರಯತಿಸುತ್ತಿರುವ ಇಂಥವರ ಮದ್ಯೆ ನಲುಗುತ್ತಿರುವ ಕನ್ನಡ ತಾಯಿ ಮತ್ತು ಕನ್ನಡಿಗರು ಕರುಣೆಗೆ ಅರ್ಹರು ಅಷ್ಟೇ .
 ಇಷ್ಟೆಲ್ಲಾ ಸಮಸ್ಯೆಗಳ ಮದ್ಯೆ , ಎಡಗೈಗು , ಬಲಗೈಗು ವರ್ಣಾಶ್ರಮ ಕಲ್ಪಿಸಿ ಏನೋ ಕಂಡು ಹಿಡಿದೇ ಎಂದು ಬೀಗುವ ಬುದ್ದಿಜೀವಿಗಳು.... ತಾಯಿ ಕನ್ನಡಾಂಬೆ, 

ಕೊನೆಮಾತು : "ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" ಅನ್ನುವ ರಕ್ಷಣಾ ವೇದಿಕೆಯವರೇ ಕರ್ನಾಟಕದಲ್ಲಿ ನೂರಾರು ಸಾವಿರಾರು ವರ್ಷದಿಂದ ಬದುಕಿರುವ ತುಳುವರು , ಕೊಂಕಣಿಗರು , ಕೊಡವರು ನಿಮಗೆ ಯಾವ ತರಹ ಕಾಣಿಸುತ್ತಾರೆ ?. ಕನ್ನಡಿಗನಿಗೆ ಬೇಕಾಗಿರುವುದು ಸಾರ್ವಭೌಮತೆ ಅಲ್ಲ , ಸ್ವಾಭಿಮಾನದ ಬದುಕು ನೆನಪಿರಲಿ..