ಶುಕ್ರವಾರ, ಆಗಸ್ಟ್ 30, 2013

ಸಾಯಿತಿಗಳು ಮತ್ತು ಸೋಮುವಾದಿಗಳು

ಲೇಖಕರು - ವಿಶ್ವನಾಥ್ ರೆಡ್ಡಿ 









(ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ)

ಅದ್ಹೇಗೆ ಬಂತೋ ಗೊತ್ತಿಲ್ಲ ಸೋಮವಾದಿ ಕುಟ್ಟಣ್ಣನಿಗೆ, ಮಧ್ಯಪಾನ ಮಾಡಿದ ನಂತರ ಮನುಷ್ಯನಲ್ಲಾಗುವ ಬದಲಾವಣೆಗಳ ಕುರಿತು ಒಂದು ಲೇಖನ ಬರೆಯಬೇಕೆಂಬ ಬಯಕೆ ಶುರುವಾಗಿಬಿಟ್ಟಿತ್ತು. ಅದಕ್ಕಾಗಿ ಆತ ಬೆಂಗಳೂರಿನ ಬಾರೊಂದರಲ್ಲಿ ಕುಳಿತು ಗುಪ್ತವಾಗಿ ಕುಡುಕರ ದೇಹ ಭಾಷೆಗಳನ್ನು ಅಧ್ಯಯನ ಮಾಡಲು ತೀರ್ಮಾನಿಸಿದ. ಒಂದು ದಿನ ಕತ್ತಲಾಗುತ್ತಿದ್ದಂತೆ ಬಾರೊಳಗೆ ಹೊಕ್ಕು ಮೂಲೆಯೊಂದರ ಟೇಬಲ್ ಹಿಡಿದು ಕುಳಿತುಕೊಳ್ಳುವಷ್ಟರಲ್ಲಿ, 10-15 ಜನರಿದ್ದ ಇನ್ನೊಂದು ಗ್ಯಾಂಗು ಬಂದು ಈತನ ಹಿಂದಿನ ಇನ್ನೊಂದು ಟೇಬಲ್‌ನಲ್ಲಿ ಆಸೀನವಾಯಿತು. ತಿರುಗಿ ನೋಡುವಷ್ಟರಲ್ಲಿ ಆತನಿಗೆ ಕಾಣಿಸಿದ್ದು ಖ್ಯಾತ ಸಾಯಿತಿ  , ರಾಬರಿ ಅಂಗಡಿಯ ಮಾಲೀಕ ಮತ್ತು ಅವನ ಪಟಾಲಮ್ಮು. ಅವರೊಂದಿಗೆ, ಯಾವಾಗಲೂ ವಡಾ ವಡಾ ಅಂತ ವದರುವ ಅತ್ಯಾತೀತವಾದಿ ಸುವರ್ ಸಂಜು ಇದ್ದದ್ದನ್ನು ನೋಡಿ, ಸೋಮವಾದಿ ಕುಟ್ಟಣ್ಣ ನಿಗೆ ಆಕಾಶಕ್ಕೆ ಮೂರೇ ಗೇಣು! ಯಾಕೆಂದರೆ ಆತನ ಟಾಪಿಕ್ಕಿಗೆ ಸರಿಯಾದ ವ್ಯಕ್ತಿಗಳೇ ಸಿಕ್ಕಿದ್ದರು.!

ಕುಟ್ಟಣ್ಣ ಅವರ ಟೇಬಲ್ ಕಡೆಗೇ ಕಿವಿಯಾಗಿಸಿ ಕುಳಿತಿದ್ದ. ಮೊದಮೊದಲು ಶಾಂತವಾಗಿಯೇ ಶುರುವಾದ ಗುಂಡು ಪಾರ್ಟಿ, ಬರು ಬರುತ್ತಾ ಸೋಮವಾದಿಗಳ ಕಡೆಗೇನೇ ನಿಶಾನೆ ಇಡತೊಡಗಿತ್ತು. ಕ್ಯಾತ ಸಾಯಿತಿ  ಮಾತನಾಡುತ್ತಿದ್ದ; ಈ ಸೋಮವಾದಿಗಳ ಕಿರಿ ಕಿರಿ ಜಾಸ್ತಿಯಾಯ್ತು. ಏನೇನೋ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡೋ ನಮ್ಮ ಸೀಕ್ರೇಟು ಅವರಿಗೆ ಗೊತ್ತಾಗಿಬಿಟ್ಟಿದೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ನಮಗೆ ಹೆಚ್ಚಿನ ಅವಮಾನವಾಗುತ್ತಿದೆ. ಏನೋ ಇದುವರೆಗೂ ನಾನೆಲ್ಲೂ ಅದರ ಹೆಸರೇ ಕೇಳಿಲ್ಲ, ಅಂತ ರೋಗ ನನಗೆ ಬಂದಿದೆಯೆಂದು ಸುಳ್ಳೇ ಸುದ್ದಿ ಹಬ್ಬಿಸುತ್ತಿದ್ದಾರೆ. ಅದೆಲ್ಲ ಸುಳ್ಳು.ಬೇಕಾದರೆ ನೀವೇ ನೋಡಿ, ಅಂದವನೇ ಎದ್ದು ನಿಂತು ಹಿಮ್ಮುಖವಾಗಿ ಬಗ್ಗಿ ನಿಂತುಬಿಟ್ಟ!. ಅಷ್ಟರಲ್ಲೇ ನಾಲ್ಕು ಪೆಗ್ಗು ಹೊಡೆದಿದ್ದನಲ್ಲ ಸುವರ್ ಸಂಜು, ಎದ್ದು ನಿಂತವನೇ ಅಣ್ಣಾ ನೀನು ಕೂತ್ಕೋಳಣ್ಣಾ ನಾವು ಇಲ್ಲವಾ ನಿನ್ನ ತಮ್ಮಂದಿರು.... ನಿನಗೆ ಅವಮಾನ ಮಾಡಿದ ಮೇಲೆ ಅದು ನಮಗೆ ಆದಂಗಣ್ಣಾ..... ನಮ್ಮ ಸಾಹೇಬರು ಇದ್ದಾರೆ ಸುಜ್ಞಾನಿ ರುದ್ದರ್. ಅವರ ಹೆಸರು ಕೇಳಿದರೆ ಸಾಕು ಈ ಸೋಮುವಾದಿಗಳೆಲ್ಲ ಗಡ ಗಡ ಗಡ.... ಅಂದವನೇ ಏ ವೇಯ್ಟರ್ ಒನ್ ಮೋರ್ ಪೆಗ್ ಅಂತ ಕೂಗಿ ಕುಳಿತುಕೊಂಡುಬಿಟ್ಟ.

ಕುಟ್ಟಣ್ಣ ಮೊದಲಿನಿಂದ ಶುರುವಾದ ಅವರ ಎಲ್ಲಾ ಸಂಭಾಷಣೆಯನ್ನೂ ಗುಪ್ತವಾಗಿ ನೋಟ್ಸ್ ಮಾಡಿಕೊಳ್ಳುತ್ತಿದ್ದ. ಆತನಿಗೆ ಒಂದಂತೂ ಸ್ಪಷ್ಟವಾಗಿ ಹೋಗಿತ್ತು; ಎಣ್ಣೆ ಹೊಡೆಯದ ಹೊರತು ಇವರಿಗೆ ಮಾತನಾಡೋಕೆ ಸುತಾರಾಂ ಧೈರ್ಯ ಬರುವದಿಲ್ಲ. ಎಣ್ಣೆಯೇ ಇವರ ಎನರ್ಜಿ! ಸರಕಾರ ಮಧ್ಯಪಾನ ನಿಷೇಧದಂತ ಕಾಯಿದೆಯೇನಾದರೂ ಜಾರಿಗೆ ತಂದರೆ ಇವರ ಬದುಕೇ ದುಸ್ತರವಾಗುತ್ತದೆ!ಇವರಿಗೆ ಅತ್ಯುತ್ತಮ ಯೋಚನೆಗಳು ಹುಟ್ಟುವದು ಬಾರುಗಳಲ್ಲಿಯೇ!

ಕುಟ್ಟಣ್ಣ ಇನ್ನೊಂದು ಗಮನಿಸಿದ ಅಂಶವೆಂದರೆ ವೇಯ್ಟರ್ ಬಿಲ್ಲು ತಂದಿಡುವ ಮೊದಲೇ ಮೂತ್ರ ವಿಸರ್ಜನೆಯ ನೆಪದಲ್ಲಿ ಟೇಬಲ್ ಪೂರಾ ಖಾಲಿಯಾಗಿದ್ದುದು.
ತಂಡದ ಎಲ್ಲಾ ಸದಸ್ಯರು ಒಬ್ಬೊಬ್ಬರಾಗಿ ಕೆಳಗಡೆ ಜಮಾವಣೆಯಾಗಿದ್ದರು. ಅವರನ್ನೆಲ್ಲಾ ವಿಚಾರ ಗೋಷ್ಟಿಗೆ ಕರೆಸಿದ ತಪ್ಪಿಗೆ, ಮುಖ ಹಿಂಜಿಕೊಂಡೇ ರಾಬರಿ ಅಂಗಡಿ ಮಾಲೀಕ ಬಿಲ್ಲು ಚುಕ್ತಾ ಮಾಡಿ ಬಂದ. ಹಿಂದೆಯೇ ಕೆಳಗಿಳಿದು ಬಂದ ಕುಟ್ಟಣ್ಣನಿಗೆ ಕಾಣಿಸಿದ್ದನ್ನು ಅವರ ಇನ್ನೊಂದು ಮುಖ. .....!.

ಅದೇ ಇನ್ನೊಂದು ರೋಚಕ ಅಧ್ಯಾಯ...............ಸಧ್ಯದಲ್ಲೇ ನಿರೀಕ್ಷಿಸಿ.!!

(ಸಶೇಷ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ